ಆ.10ರಿಂದ ಕಾಂಗ್ರೆಸ್ ಕಾರ್ಯಕರ್ತರಿಂದ ಡೆಂಗ್ ನಿಯಂತ್ರಣ ಜಾಗೃತಿ ಅಭಿಯಾನ

ಮಂಗಳೂರು, ಆ. 6: ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮನೆ ಮನೆಗೆ ಆ. 10 ರಿಂದ ಭೇಟಿ ನೀಡಿ ಡೆಂಗ್ ಬಗ್ಗೆ ಜನರಿಗೆ ತಿಳುವಳಿಕೆಯನ್ನು ಮೂಡಿಸಲು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಹೇಳಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಮಂಗಳೂರು ನಗರ ಬ್ಲಾಕ್ ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಡೆಂಗ್ ಕಾಯಿಲೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದನ್ನು ತಡೆಗಟ್ಟಲು ಮತ್ತು ಜನರಿಗೆ ಅರಿವು ಮೂಡಿಸಲು ಹಾಗೂ ರೋಗವನ್ನು ನಿಯಂತ್ರಿಸಲು ಅಭಿಯಾನವನ್ನು ಕಾಂಗ್ರೆಸ್ ಪ್ರಾರಂಭಿಸಲು ಉದ್ದೇಶಿಸಿದೆ ಎಂದು ಜೆ.ಆರ್. ಲೋಬೋ ನುಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಆರೋಗ್ಯ ಇಲಾಖೆಯ ನಿವೃತ್ತ ಮೇಲ್ವಿಚಾರಕ ಜಯರಾಮ್ ಭಾಗವಹಿಸಿದ್ದರು. ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಸಲೀಂ, ವಿಶ್ವಾಸ್ ಕುಮಾರ್ ದಾಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಎ. ಸುರೇಶ್ ಶೆಟ್ಟಿ, ಪ್ರಭಾಕರ ಶ್ರೇಯಾನ್, ಟಿ.ಕೆ. ಸುಧೀರ್ ಉಪಸ್ಥಿತರಿದ್ದರು.





