ಕರ್ನಾಟಕ ಭವನ: ನೂತನ ಕಟ್ಟಡದ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ
ಹೊಸದಿಲ್ಲಿ, ಆ.6: ಕರ್ನಾಟಕ ಭವನದ ನೂತನ ಕಟ್ಟಡ ನಿರ್ಮಾಣದ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಹೊಸ ಕಟ್ಟಡದ ನೀಲಿನಕ್ಷೆ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಂಗಳವಾರ ಕರ್ನಾಟಕ ಭವನದಲ್ಲಿ ವಿಸ್ತೃತ ಚರ್ಚೆ ನಡೆಸಿದರು. ಹಳೆಯ ನಕಾಶೆಯಲ್ಲಿ ಕಚೇರಿ ಕಟ್ಟಡಕ್ಕೆ ಎರಡು ಅಂತಸ್ತುಗಳನ್ನು ಕಾಯ್ದಿರಿಸಲಾಗಿದೆ. ಕರ್ನಾಟಕ ಸಂಸ್ಕೃತಿ ಬಿಂಬ ಕಾಣುತ್ತಿಲ್ಲ, ಹೀಗಾಗಿ ಇರುವ ನಕಾಶೆಯಲ್ಲಿ ಬದಲಾವಣೆ ಮಾಡಿ, ಕಚೇರಿ ಕಟ್ಟಡ ಒಂದು ಅಂತಸ್ತಿಗೆ ಮಾತ್ರ ಸೀಮಿತಗೊಳಿಸುವಂತೆ ಸೂಚಿಸಿದರು.
ಅತಿಥಿಗಳ ಕೊಠಡಿ ಸಂಸ್ಕೃತಿಯ ಪ್ರತಿಬಿಂಬಿಕ್ಕೆ ಆದ್ಯತೆ ನೀಡುವ ಹೊಸ ನೀಲಿನಕ್ಷೆಯನ್ನು ನಾಳೆ ಸಂಜೆಯೊಳಗೆ ಸಿದ್ದಪಡಿಸುವಂತೆ ಹಾಗೂ ಆ.15ರ ಬಳಿಕ ಹಳೆಯ ಕಟ್ಟಡ ತೆರವಿನ ಕೆಲಸಕ್ಕೆ ಚಾಲನೆ ನೀಡಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಶಾಸಕರಾದ ಜಗದೀಶ್ ಶೆಟ್ಟರ್ ಹಾಗೂ ಗೋವಿಂದ ಕಾರಜೋಳ, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮಿನಾರಾಯಣ, ಕರ್ನಾಟಕ ಭವನದ ನಿವಾಸಿ ಆಯುಕ್ತ ಅತುಲ್ ಕುಮಾರ್ ತಿವಾರಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





