ಸ್ಟೀವನ್ ಸ್ಮಿತ್ ಮೂರನೇ ಸ್ಥಾನಕ್ಕೆ ಲಗ್ಗೆ
ಐಸಿಸಿ ಟೆಸ್ಟ್ ರ‍್ಯಾಂಕಿಂಗ್

ದುಬೈ, ಆ.6: ಆಸ್ಟ್ರೇಲಿಯದ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಮಂಗಳವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ನಲ್ಲಿ ಭಾರತದ ಚೇತೇಶ್ವರ ಪೂಜಾರ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಎಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ್ದ ಸ್ಮಿತ್ ಈ ಸಾಧನೆ ಮಾಡಿದ್ದಾರೆ.
ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿ ವಾಪಸಾದ ಬಳಿಕ ಸ್ಮಿತ್ ಆಡಿದ ಮೊದಲ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೆಸ್ಟ್ ರ‍್ಯಾಂಕಿಂಗ್ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದರೆ, ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಎರಡನೇ, ಸ್ಮಿತ್ ಮೂರನೇ ಹಾಗೂ ಪೂಜಾರ ನಾಲ್ಕನೇ ಸ್ಥಾನದಲ್ಲಿದ್ದಾರೆ.ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ 144 ಹಾಗೂ 142 ರನ್ ಗಳಿಸಿದ್ದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವ ಪಡೆದಿದ್ದಾರೆ. ಅಗ್ರ ರ್ಯಾಂಕಿನಲ್ಲಿರುವ ಕೊಹ್ಲಿ 922 ಹಾಗೂ ನ್ಯೂಝಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ 913 ಅಂಕ ಗಳಿಸಿದ್ದಾರೆ. ಒಂದು ಸ್ಥಾನ ಭಡ್ತಿ ಪಡೆದಿರುವ ಸ್ಮಿತ್ 857 ಅಂಕ ಗಳಿಸಿದ್ದಾರೆ.
ಬೌಲರ್‌ಗಳ ರ‍್ಯಾಂಕಿಂಗ್ನಲ್ಲಿ ಆಸ್ಟ್ರೇಲಿಯದ ಸ್ಪಿನ್ನರ್ ನಥಾನ್ ಲಿಯೊನ್ 6 ಸ್ಥಾನ ಭಡ್ತಿ ಪಡೆದು 13ನೇ ಸ್ಥಾನಕ್ಕೇರಿದ್ದಾರೆ. ಮೊದಲ ಟೆಸ್ಟ್ ನಲ್ಲಿ ಲಿಯೊನ್ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ್ದರು. ಮೊದಲ ಟೆಸ್ಟ್‌ನಲ್ಲಿ 7 ವಿಕೆಟ್‌ಗಳ ಗೊಂಚಲು ಪಡೆದಿರುವ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಜೀವನಶ್ರೇಷ್ಠ 898 ಅಂಕ ಗಳಿಸಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ 100 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ 2 ಸ್ಥಾನ ಭಡ್ತಿ ಪಡೆದು 16ನೇ ಸ್ಥಾನ ತಲುಪಿದ್ದಾರೆ.







