ಪತ್ರಿಕೆ ಉದ್ಯಮವಾಗದೆ ಸೇವಾ ಮಾಧ್ಯಮವಾಗಿ ಉಳಿಯಲಿ-ಸಂಜೀವ ಮಠಂದೂರು
ಪುತ್ತೂರಿನಲ್ಲಿ ಪತ್ರಿಕಾ ದಿನಾಚರಣೆ; ಮೀಡಿಯಾ ಎಟ್ ವಿಲೇಜ್ ಅಭಿಯಾನ ಉದ್ಘಾಟನೆ

ಪುತ್ತೂರು: ಪ್ರಜಾಪ್ರಭುತ್ವದ ಮೌಲ್ಯವನ್ನು ಹೆಚ್ಚಿಸುವಲ್ಲಿ ಮಹತ್ವ ಪಾತ್ರವಹಿಸುತ್ತಿರುವ ಪತ್ರಿಕಾರಂಗ ಸಂವಿಧಾನದ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತದೆ. ಪತ್ರಿಕೋದ್ಯಮ ಉದ್ದಿಮೆಯಾಗಿ ಪರಿವರ್ತಿತವಾಗದೆ ಸೇವಾ ಮಾಧ್ಯಮವಾಗಿಯೇ ಉಳಿಯಬೇಕಾದದ್ದು ಇಂದಿನ ಅನಿವಾರ್ಯತೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಸಂಪ್ಯದ ಆರ್ಯಾಪು ಸಿಎ ಬ್ಯಾಂಕ್ ಸಭಾ ಭವನದಲ್ಲಿ ಮಂಗಳವಾರ ನಡೆದ ಆರ್ಯಾಪು ಗ್ರಾ.ಪಂ. ಮತ್ತು ಆರ್ಯಾಪು ಸಹಕಾರಿ ಸಂಘದ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ - 2019, `ಮೀಡಿಯಾ ಎಟ್ ವಿಲೇಜ್' ಅಭಿಯಾನ ಉದ್ಘಾಟನೆ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಜನತೆಗೆ ಮಾಧ್ಯಮ ವ್ಯವಸ್ಥೆಯ ಕುರಿತು ಒಂದಷ್ಟು ವಿಚಾರಗಳನ್ನು ತಿಳಿಸಿಕೊಡುವ ಯೋಚನೆಯೊಂದಿಗೆ ಪುತ್ತೂರು ಪತ್ರಕರ್ತರ ಸಂಘ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪುತ್ತೂರಿನ ಪತ್ರಕರ್ತರು ತಮ್ಮತನ ಉಳಿಸಿ ಕೊಂಡಿದ್ದಾರೆ. ವೃತ್ತಿಧರ್ಮ ಮಾತ್ರವಾಗಿರದೆ ಸಮಾಜ ಧರ್ಮವೂ ಉಳಿಯಬೇಕು ಎನ್ನುವ ಅನುಕರಣೀಯ ಯೋಜನೆಯ ಮೂಲಕದ ಕಾಳಜಿ ಶ್ಲಾಘನೀಯ ಎಂದರು.
ಭಾರತದ ಆತ್ಮ ಗ್ರಾಮದಲ್ಲಿದೆ- ಕೃಷ್ಣಭಟ್
ಪ್ರಧಾನ ಉಪನ್ಯಾಸಕರಾಗಿ ಭಾಗವಹಿಸಿ ಮೀಡಿಯಾ ಎಟ್ ವಿಲೇಜ್ ಅಭಿಯಾನ ಉದ್ಘಾಟಿಸಿದ ಬೆಂಗಳೂರಿನ ಹಿರಿಯ ಪತ್ರಕರ್ತ ಕೃಷ್ಣ ಭಟ್, ಭಾರತದ ನಿಜವಾದ ಆತ್ಮ ಗ್ರಾಮಗಳಲ್ಲಿದೆ. ಗ್ರಾಮೀಣ ಭಾಗದ ಕಥೆಗಳು ಹೊಸ ಭರವಸೆ ಹುಟ್ಟಿಸುತ್ತವೆ. ಪುತ್ತೂರಿನ ಪತ್ರಕರ್ತರು ಸಮಾಜದ ಜತೆ ಬೆರೆತುಕೊಂಡು ದೇಶಕ್ಕೆ ಮಾದರಿಯಾಗುವ ಹೊಸ ಪರಿಕಲ್ಪನೆಯಯನ್ನು ಆರಂಭಿಸಿದ್ದಾರೆ. ಇಂದು ಮಾಧ್ಯಮಗಳು ಜನರ ಬದುಕನ್ನು ತುಂಬಾ ಪ್ರಭಾವಿಸಿವೆ. ಬದುಕಿನ ಅವಿಭಾಜ್ಯ ಅಂಗವಾಗಿ ಮಾಧ್ಯಮ ಗುರುತಿಸಿಕೊಂಡಿದೆ. ಪತ್ರಕರ್ತರು ಸ್ವಾರ್ಥಕ್ಕಾಗಿ ಏನು ಮಾಡದಿದ್ದರೂ ಸಮಾಜಕ್ಕಾಗಿ ಮಾಡಿದ್ದಾರೆ. ಒಬ್ಬರನ್ನೊಬ್ಬರು ಬೆಸೆಯುವ ಕೆಲಸ ಮಾಧ್ಯಮದ ಮೂಲಕ ಆಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಪ್ಯದ ಹಿರಿಯ ನಾಟಿವೈದ್ಯೆ ಪದ್ಮಾವತಿ ಪೂಜಾರಿ ಹಾಗೂ ಡಾಕ್ಟರೇಟ್ ಪದವಿ ಪಡೆದ ದೈವನರ್ತಕ ರವೀಶ್ ಪಡುಮಲೆ ಅವರನ್ನು ಸನ್ಮಾನಿಸಲಾಯಿತು ಹಾಗೂ ಸಂಪನ್ಮೂಲ ವ್ಯಕ್ತಿಯಾದ ಹಿರಿಯ ಪತ್ರಕರ್ತ ಕೃಷ್ಣ ಭಟ್ ಅವರನ್ನು ಗೌರವಿಸಲಾಯಿತು. ಸದಸ್ಯರಾದ ಶ್ರವಣ್ ಕುಮಾರ್ ನಾಳ ಹಾಗೂ ರಾಜೇಶ್ ಪಟ್ಟೆ ಸನ್ಮಾನ ಪತ್ರ ವಾಚಿಸಿದರು. ಸದಸ್ಯ ಕುಮಾರ್ ಕಲ್ಲಾರೆ ಸನ್ಮಾನಿತರ ಪರಿಚಯ ಮಾಡಿದರು.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಅಧ್ಯಕ್ಷತೆ ವಹಿಸಿದ್ದರು. ಆರ್ಯಾಪು ಗ್ರಾ. ಪಂ. ಅಧ್ಯಕ್ಷೆ ಗೀತಾ ಚೆನ್ನಪ್ಪ ಮರಿಕೆ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸಕ್ತಿವೇಲು, ಗ್ರಾ.ಪಂ. ಉಪಾಧ್ಯಕ್ಷ ವಸಂತ ಶ್ರೀದುರ್ಗ ಮಾತನಾಡಿದರು.
ಸಂಘದ ಕಾರ್ಯದರ್ಶಿ ಅನೀಶ್ ಮರೀಲ್ ಸ್ವಾಗತಿಸಿ, ಸದಸ್ಯರಾದ ಸಿದ್ದೀಕ್ ನೀರಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ್ ರೈ ಕುತ್ಯಾಳ ವಂದಿಸಿದರು. ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.
ಸಂವಾದ ಕಾರ್ಯಕ್ರಮ
ಸಭಾ ಕಾರ್ಯಕ್ರಮದ ಬಳಿಕ ಸಾಮಾಜಿಕ ಸ್ವಾಸ್ಥ್ಯ - ಮಾಧ್ಯಮಗಳ ಪಾತ್ರ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಪತ್ರಕರ್ತ ಮೇಘಾ ಪಾಲೆತ್ತಾಡಿ ಸಂವಾದ ನಿರ್ವಹಿಸಿದರು. ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು, ನವೋದಯ ಸ್ವಸಹಾಯ ಸಂಘದ ಸದಸ್ಯರು, ಗ್ರಾಪಂ ಸದಸ್ಯರು ಮತ್ತು ಸಾರ್ವಜನಿಕರು ಸಂವಾದದಲ್ಲಿ ಭಾಗವಹಿಸಿದರು.







