ಚಿಂತಿಸಬೇಡಿ, ಎಲ್ಲವನ್ನೂ ಬಗೆಹರಿಸುತ್ತೇವೆ ಅಫ್ರಿದಿ ಟ್ವೀಟ್ಗೆ ಗಂಭೀರ್ ತಿರುಗೇಟು

ಹೊಸದಿಲ್ಲಿ, ಆ.6: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಪೂರ್ವ ದಿಲ್ಲಿಯ ಸಂಸದ ಗೌತಮ್ ಗಂಭೀರ್ ಜಮ್ಮು-ಕಾಶ್ಮೀರ ವಿಷಯಕ್ಕೆ ಟ್ವೀಟ್ ಮಾಡಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ಸೋಮವಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಪಡಿಸಿದ ಕೆಲವೇ ಗಂಟೆಯಲ್ಲಿ ಪ್ರತಿಕ್ರಿಯಿಸಿರುವ ಪಾಕ್‌ನ ಮಾಜಿ ಆಲ್‌ರೌಂಡರ್ ಅಫ್ರಿದಿ, ವಿಶ್ವಸಂಸ್ಥೆಯ ವೌನವನ್ನು ಪ್ರಶ್ನಿಸಿದ್ದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದರು.
‘‘ವಿಶ್ವಸಂಸ್ಥೆಯ ನಿರ್ಣಯದ ಪ್ರಕಾರ ಕಾಶ್ಮೀರ ಪ್ರಜೆಗಳಿಗೆ ಸರಿಯಾದ ಹಕ್ಕುಗಳನ್ನು ನೀಡಬೇಕು. ಹಕ್ಕುಗಳ ಸ್ವಾತಂತ್ರ್ಯವನ್ನು ನಾವೆಲ್ಲರೂ ಬಯಸುತ್ತೇವೆ. ವಿಶ್ವಸಂಸ್ಥೆ ಇದನ್ನು ಏಕೆ ಸೃಷ್ಟಿಸಿದೆ. ಈಗೇಕೆ ನಿದ್ದೆಗೆ ಜಾರಿದೆ? ಮಾನವೀಯತೆಯ ವಿರುದ್ಧ ಕಾಶ್ಮೀರದಲ್ಲಿ ನಡೆಯುತ್ತಿರುವ ಅಪ್ರಚೋದಿತ ಆಕ್ರಮಣ ಹಾಗೂ ಅಪರಾಧಗಳನ್ನು ಅದು ಗಮನಿಸಬೇಕು. ಅಮೆರಿಕದ ಅಧ್ಯಕ್ಷರು ಈ ವಿಚಾರದಲ್ಲಿ ಮಧ್ಯಸ್ಥಿಕೆ ಪಾತ್ರವಹಿಸಬೇಕು’’ ಎಂದು ಅಫ್ರಿದಿ ಟ್ವೀಟ್ ಮಾಡಿದ್ದರು.
‘‘ಈ ವಿಚಾರವನ್ನು ಪ್ರಸ್ತಾವಿಸಿದ್ದಕ್ಕೆ ಅಫ್ರಿದಿಗೆ ಅಭಿನಂದಿಸಬೇಕಾಗಿದೆ. ಇವೆಲ್ಲವೂ ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದಲ್ಲೇ ನಡೆಯುತ್ತಿದೆ ಎಂಬ ಒಂದು ಮಾತನ್ನು ಮಾತ್ರ ಉಲ್ಲೇಖಿಸಲು ಅವರು ಮರೆತಿದ್ದಾರೆ. ಚಿಂತಿಸಬೇಡಿ, ನಾವಿದನ್ನು ಬಗೆಹರಿಸುತ್ತೇವೆ ಮಗನೇ!!! ಎಂದು ಗಂಭೀರ್ ಮರು ಟ್ವೀಟ್ ಮಾಡಿದ್ದಾರೆ.







