ಇಂಗ್ಲೆಂಡ್ ವೇಗದ ಬೌಲರ್ ಆ್ಯಂಡರ್ಸನ್ 2ನೇ ಟೆಸ್ಟ್ ಗೆ ಅಲಭ್ಯ

ಲಂಡನ್, ಆ.6: ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಗಾಯದ ಸಮಸ್ಯೆಯಿಂದ ಯಾವಾಗ ಚೇತರಿಸಿಕೊಳ್ಳಲಿದ್ದಾರೆಂಬ ಬಗ್ಗೆ ಅನಿಶ್ಚಿತತೆ ಇರುವ ಕಾರಣ ಆ್ಯಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಿಂದ ಹೊರಗುಳಿದಿದ್ದಾರೆ.
ಇಂಗ್ಲೆಂಡ್‌ನ ಪರ ಗರಿಷ್ಠ ಟೆಸ್ಟ್ ವಿಕೆಟ್ ಗಳಿಸಿದ ಸಾಧನೆ ಮಾಡಿರುವ ಆ್ಯಂಡರ್ಸನ್ ಎಜ್‌ಬಾಸ್ಟನ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 4 ಓವರ್‌ಗಳ ಬೌಲಿಂಗ್ ಮಾಡಿದ್ದರು. ಆ ಬಳಿಕ ಅವರಿಗೆ ಮತ್ತೆ ಬೌಲಿಂಗ್ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಈ ಪಂದ್ಯವನ್ನು ಆಸ್ಟ್ರೇಲಿಯ 251 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು.
ಆ.14 ರಂದು ಬುಧವಾರ ಲಾರ್ಡ್ಸ್‌ನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಆ್ಯಂಡರ್ಸನ್ ಆಡುವ ಸಾಧ್ಯತೆಯಿಲ್ಲ ಎಂಬ ಅಂಶ ಸ್ಕಾನಿಂಗ್‌ನ ಮೂಲಕ ಗೊತ್ತಾಗಿದೆ. ಮೊದಲ ಟೆಸ್ಟ್‌ನ ಮೊದಲ ದಿನವೇ ಗಾಯದ ಸಮಸ್ಯೆಗೆ ಸಿಲುಕಿದ್ದ 37ರ ಹರೆಯದ ಆ್ಯಂಡರ್ಸನ್ ಮೊದಲ ಟೆಸ್ಟ್‌ನ ಎರಡು ಇನಿಂಗ್ಸ್ ಗಳಲ್ಲೂ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.
ಲಂಕಾಶೈರ್ ಪರ ಆಡುವಾಗ ಆ್ಯಂಡರ್ಸನ್‌ಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಒಂದು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಆ್ಯಂಡರ್ಸನ್ ಮೀನಖಂಡ ಸೆಳೆತದಿಂದ ಬಳಲುತ್ತಿರುವುದು ಎಂಆರ್‌ಐ ಸ್ಕ್ಯಾನಿಂಗ್‌ನಿಂದ ದೃಢಪಟ್ಟಿತ್ತು.







