ಯೋಧರನ್ನು ರಂಜಿಸಲು ಗಾಯಕನಾದ ಎಂಎಸ್ ಧೋನಿ

ಹೊಸದಿಲ್ಲಿ, ಆ.6: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಜಮ್ಮು-ಕಾಶ್ಮೀರದಲ್ಲಿ ಸೇನಾ ಕರ್ತವ್ಯದಲ್ಲಿ ನಿರತರಾಗಿದ್ದಾರೆ.ಪ್ರಾಂತೀಯ ಸೇನಾ ಬೆಟಾಲಿಯನ್‌ನ ಸದಸ್ಯರ ಜೊತೆ ವಾಲಿಬಾಲ್ ಆಡಿದ ಧೋನಿ, ಶೂಗಳನ್ನು ಪಾಲಿಶ್ ಮಾಡಿದರು. 38ರ ಹರೆಯದ ಧೋನಿ, ಸೇನೆಯ ಸಮವಸ್ತ್ರ ಧರಿಸುವಾಗ, ಬಾಲಿವುಡ್ ಚಿತ್ರ ‘ಕಭಿ ಕಭೀ’ಯ ಜನಪ್ರಿಯ ಗೀತೆ ‘‘ಮೈ ಪಲ್ ದೋ ಪಲ್ ಕಾ ಶಾಯರ್ ಹೂಂ’ಯನ್ನು ಹಾಡಿ ಯೋಧರನ್ನು ರಂಜಿಸಿದರು.
ಧೋನಿ ಜು.30ರಿಂದ ತನ್ನ ರೆಜಿಮೆಂಟ್‌ನಲ್ಲಿ ಸೇವೆ ಆರಂಭಿಸಿದ್ದಾರೆ. ‘‘ಲೆಫ್ಟಿನೆಂಟ್ ಕರ್ನಲ್ ಧೋನಿ ಇಂದು ಇಲ್ಲಿಗೆ ಆಗಮಿಸಿದ್ದು, ತನ್ನ ಯುನಿಟ್‌ನ್ನು ಸೇರಿಕೊಂಡಿದ್ದಾರೆ’’ ಎಂದು ಓರ್ವ ಸೇನಾಧಿಕಾರಿ ಹೇಳಿದ್ದಾರೆ. ಧೋನಿ ಆಗಸ್ಟ್ 15ರ ತನಕ 106 ಟಿಎ ಬೆಟಾಲಿಯನ್(ಪ್ಯಾರಾ)ಜೊತೆ ಇರಲಿದ್ದಾರೆ. ಸೈನಿಕರೊಂದಿಗೆ ಗಸ್ತು ತಿರುಗುವುದು ಹಾಗೂ ಕಾವಲುಗಾರನ ಕೆಲಸ ಮಾಡಲಿದ್ದಾರೆ. ಭಾರತದ ಹಿರಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಧೋನಿ ಭಾರತೀಯ ಕ್ರಿಕೆಟ್ ತಂಡದಿಂದ ಎರಡು ತಿಂಗಳು ವಿರಾಮ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾಗಿಲ್ಲ.





