ದಕ್ಷಿಣ ಆಫ್ರಿಕದ ಟೆಸ್ಟ್ ನಾಯಕನಾಗಿ ಎಫ್‌ಡು ಪ್ಲೆಸಿಸ್

ಜೋಹಾನ್ಸ್‌ಬರ್ಗ್, ಆ.6: ಭಾರತ ವಿರುದ್ಧ ಅಕ್ಟೋಬರ್‌ನಲ್ಲಿ ನಡೆಯುವ ಟೆಸ್ಟ್ ಸರಣಿಯಲ್ಲಿ ಎಫ್‌ಡು ಪ್ಲೆಸಿಸ್ ನಾಯಕನಾಗಿ ದಕ್ಷಿಣ ಆಫ್ರಿಕ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ, ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ನಾಯಕನಾಗಿರುವುದಿಲ್ಲ ಎಂದು ದಕ್ಷಿಣ ಆಫ್ರಿಕ ಕ್ರಿಕೆಟ್‌ನ ನೂತನ ಹಂಗಾಮಿ ನಿರ್ದೇಶಕ ಕೊರಿ ವ್ಯಾನ್ ಝಿಲ್ ಮಂಗಳವಾರ ದೃಢಪಡಿಸಿದ್ದಾರೆ.
ಮುಖ್ಯ ಕೋಚ್ ಒಟ್ಟಿಸ್ ಗಿಬ್ಸನ್ ಹಾಗೂ ಅವರ ಸಹಾಯಕ ಸಿಬ್ಬಂದಿ ನಡುವೆ ಸಂಘರ್ಷ ನಡೆದ ಬಳಿಕ ವಾರಾಂತ್ಯದಲ್ಲಿ ವ್ಯಾನ್ ಝಿಲ್‌ರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಇವರು ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಲಿದ್ದಾರೆ.
‘‘ಟೆಸ್ಟ್ ತಂಡಕ್ಕೆ ಎಫ್‌ಡು ಪ್ಲೆಸಿಸ್ ನಾಯಕನಾಗಿರುತ್ತಾರೆ.ನಾವು ಭವಿಷ್ಯದ ಬಗ್ಗೆ ಚಿತ್ತಹರಿಸುವ ಅಗತ್ಯವಿದ್ದು, 2023ರ ಟಿ-20 ವಿಶ್ವಕಪ್‌ನ ಬಗ್ಗೆಯೂ ಚರ್ಚಿಸಬೇಕಾಗಿದೆ’’ ಎಂದು ವ್ಯಾನ್‌ಝಿಲ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕ ಟೆಸ್ಟ್ ಸರಣಿಗೆ ಮೊದಲು 3 ಪಂದ್ಯಗಳ ಟಿ-20 ಅಂತರ್‌ರಾಷ್ಟ್ರೀಯ ಸರಣಿಯನ್ನು ಆಡಲಿದೆ. ದಕ್ಷಿಣ ಆಫ್ರಿಕದ ನೂತನ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಅಕ್ಟೋಬರ್ 2ರಿಂದ ಆರಂಭವಾಗಲಿದೆ.





