ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯಿಂದ ಉದ್ಯೋಗ ನಷ್ಟದ ಎಚ್ಚರಿಕೆ; ತೆರಿಗೆ ಕಡಿತಕ್ಕೆ ಸರಕಾರಕ್ಕೆ ಮನವಿ

ಮುಂಬೈ: ದೇಶದ ಆಟೋಮೊಬೈಲ್ ಕ್ಷೇತ್ರ ಸಂಕಷ್ಟಕ್ಕೀಡಾಗಿರುವ ಸುದ್ದಿ ಸಾಕಷ್ಟು ಆತಂಕಕ್ಕೆಡೆ ಮಾಡಿಕೊಟ್ಟಿರುವಂತೆಯೇ ಖ್ಯಾತ ಆಟೋಮೊಬೈಲ್ ಸಂಸ್ಥೆ ಮಹೀಂದ್ರ ಆ್ಯಂಡ್ ಮಹೀಂದ್ರ ಕೂಡ ಉದ್ಯೋಗ ನಷ್ಟದ ದೊಡ್ಡ ಅಪಾಯವನ್ನೆದುರಿಸುತ್ತಿದ್ದು ಸರಕಾರ ತೆರಿಗೆ ಕಡಿತ ಮುಂತಾದ ಕ್ರಮಗಳ ಮೂಲಕ ಮಧ್ಯ ಪ್ರವೇಶಿಸಿ ಬೇಡಿಕೆ ಹೆಚ್ಚಾಗಲು ಸಹಾಯ ಮಾಡಬೇಕೆಂದು ಕೋರಿದೆ.
ಶೇ 55ರಿಂದ ಶೇ 60ರಷ್ಟು ವಾಣಿಜ್ಯ ವಾಹನಗಳು ಹಾಗೂ ಶೇ 30ರಷ್ಟು ಪ್ಯಾಸೆಂಜರ್ ಕಾರುಗಳ ಖರೀದಿಗೆ ಸಾಮಾನ್ಯವಾಗಿ ಹಣಕಾಸು ಸೌಲಭ್ಯ ಒದಗಿಸುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಕೂಡ ಸಮಸ್ಯೆಯಲ್ಲಿರುವುದರಿಂದ ಮಹೀಂದ್ರ ಆ್ಯಂಡ್ ಮಹೀಂದ್ರ ಸಹಿತ ಮಾರುತಿ ಸುಝುಕಿ ಇಂಡಿಯಾ ಲಿ. ಹಾಗೂ ಟಾಟಾ ಮೋಟಾರ್ಸ್ ಲಿ. ಉತ್ಪಾದನೆ ಕಡಿತ ಅಥವಾ ತಾತ್ಕಾಲಿಕವಾಗಿ ಕಾರ್ಖಾನೆಗಳನ್ನು ಮುಚ್ಚುವ ಅನಿವಾರ್ಯತೆ ಎದುರಿಸುತ್ತಿವೆ.
ವಾಹನಗಳಿಗೆ ಬೇಡಿಕೆ ಹೆಚ್ಚಾಗಲು ಸರಕಾರಿ ಜಿಎಸ್‍ಟಿ ಕಡಿತಗೊಳಿಸುವ ಅತ್ಯಗತ್ಯವಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರ ಹೇಳಿದೆ. ವಾಹನಗಳ ಮಾರಾಟದಲ್ಲಿ ಇಳಿಕೆಯಿಂದಾಗಿ ಈಗಾಗಲೇ ವಾಹನ ತಯಾರಕರು, ಬಿಡಿ ಭಾಗಗಳ ಉತ್ಪಾದಕರು ಹಾಗೂ ಡೀಲರುಗಳು ಎಪ್ರಿಲ್ ತಿಂಗಳಿನಿಂದ ಸುಮಾರು 3.5 ಲಕ್ಷ ಉದ್ಯೋಗಿಗಳನ್ನು ಕೈಬಿಟ್ಟಿವೆ.
ಮೂಲ ತಯಾರಕರು, ಪೂರೈಕೆದಾರರು, ವಿತರಕರು ಹಾಗೂ ಅಸಂಘಟಿತ ವಲಯಗಳಲ್ಲಿ ಉದ್ಯೋಗ ನಷ್ಟವಾಗುತ್ತಿದೆ ಎಂದು ಮುಂಬೈಯಲ್ಲಿ ಮಹೀಂದ್ರ ಸಂಸ್ಥೆಯ ಆಡಳಿತ ನಿರ್ದೇಶಕ ಪವನ್ ಗೋಯೆಂಕ ತಿಳಿಸಿದರು.
ಟ್ರಕ್ ಹಾಗೂ ಟಿಪ್ಪರುಗಳನ್ನು ತಯಾರಿಸುವ ಮಹೀಂದ್ರ ಸಂಸ್ಥೆಯ ಘನ ವಾಹನಗಳ ಘಟಕವು ಕಳೆದ ಆರು ವರ್ಷಗಳಲ್ಲಿಯೇ ಕನಿಷ್ಠ ಪ್ರಗತಿ ದಾಖಲಿಸಿದೆ ಎಂದು ತಿಳಿದು ಬಂದಿದೆ.







