ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆಗೆ ಸಂಸತ್ತಿನ ಅಂಗೀಕಾರ

ಹೊಸದಿಲ್ಲಿ, ಆ.7: ವಿಚಾರಣೆಗೆ ಬಾಕಿಯಿರುವ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯನ್ನು ಮುಖ್ಯ ನ್ಯಾಯಾಧೀಶರನ್ನು ಹೊರತುಪಡಿಸಿ ಈಗಿನ 30ರಿಂದ 33ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಸಂಸತ್ತು ಬುಧವಾರ ಅಂಗೀಕರಿಸಿದೆ. ‘ಸರ್ವೋಚ್ಚ ನ್ಯಾಯಾಲಯ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2019 ’ನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು,ಮಸೂದೆಯನ್ನು ಅಂಗೀಕರಿಸುವಂತೆ ಸದನವನ್ನು ಆಗ್ರಹಿಸಿದರು.
‘ಮಸೂದೆಗೆ ನಮ್ಮ ಆಕ್ಷೇಪವಿಲ್ಲ. ಸಾಮಾನ್ಯವಾಗಿ ನಾವು ನ್ಯಾಯಾಂಗದ ಬಗ್ಗೆ ಚರ್ಚಿಸುವುದಿಲ್ಲ. ಅಂತಹ ಅವಕಾಶ ದಶಕದಲ್ಲಿ ಅಥವಾ ಆರು ತಿಂಗಳಿಗೆ ಒಮ್ಮೆಯೋ ನಮಗೆ ದೊರೆಯುತ್ತದೆ. ನಾವೂ ನ್ಯಾಯಾಂಗದ ಬಗ್ಗೆ ತಿಳಿಯಲು ಬಯಸಿದ್ದೇವೆ. ಹೀಗಾಗಿ ಸದನದ ಸದಸ್ಯರು ಮಸೂದೆಯ ಮೇಲೆ ಚರ್ಚೆಯನ್ನು ಬಯಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಹೇಳಿದರು.
ಇದು ಹಣಕಾಸು ಮಸೂದೆಯಾಗಿದೆ ಎಂದು ಸಭಾಪತಿ ಎಂ.ವೆಂಕಯ್ಯ ನಾಯ್ಡು ಹೇಳಿದಾಗ,ನವೆಂಬರ್‌ನಲ್ಲಿ ನ್ಯಾಯಾಂಗದ ಮೇಲೆ ಚರ್ಚೆಗೆ ತಾನು ಸಿದ್ಧವಿರುವುದಾಗಿ ಪ್ರಸಾದ್ ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದಲ್ಲಿ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯವನ್ನು ಖಚಿತಪಡಿಸುವಂತೆ ಬಿಜೆಪಿಯ ಸತೀಶಚಂದ್ರ ಅವರು ಸರಕಾರವನ್ನು ಆಗ್ರಹಿಸಿದರು.
ಸದನ ನಾಯಕ ಥಾವರಚಂದ್ ಗೆಹ್ಲೋಟ್ ಅವರು ಈ ಮಸೂದೆಯ ಜೊತೆಗೆ ‘ಜಲಿಯನವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆ, 2019ನ್ನೂ ಅಂಗೀಕರಿಸುವಂತೆ ಸದನವನ್ನು ಆಗ್ರಹಿಸಿದರಾದರೂ ಪೀಠವು ಸರ್ವೋಚ್ಚ ನ್ಯಾಯಾಲಯ ಮಸೂದೆಯನ್ನು ಮಾತ್ರ ಕೈಗೆತ್ತಿಕೊಂಡಿದ್ದು,ಅದು ಯಾವುದೇ ಚರ್ಚೆಯಿಲ್ಲದೆ ಅಂಗೀಕಾರಗೊಂಡಿತು.
ಲೋಕಸಭೆಯು ಆ.5ರಂದು ಮಸೂದೆಯನ್ನು ಅಂಗೀಕರಿಸಿತ್ತು.







