ಚಾರ್ಮಾಡಿ ಘಾಟ್ : ಎರಡು ದಿನ ವಾಹನ ಸಂಚಾರ ನಿಷೇಧ

ಮಂಗಳೂರು, ಆ.7: ದ.ಕ. ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ರಾ.ಹೆ. 73ರ ಮಂಗಳೂರು-ವಿಲ್ಲುಪುರಂ ರಸ್ತೆಯ ಚಾರ್ಮಾಡಿ ಘಾಟ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ಚಾರ್ಮಾಡಿ ಘಾಟ್ ಭಾಗದಲ್ಲಿ ಸೋಮವಾರದಿಂದ ಅಧಿಕ ಪ್ರಮಾಣದ ಮಳೆಯಾಗುತ್ತಿದ್ದು, ಮಂಗಳವಾರವೂ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಈ ಭಾಗದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಮಳೆ ಸುರಿದು ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಎರಡು ದಿನಗಳಿಗೆ ನಿರ್ಬಂಧಿಸಿ, ಆ.7ರಂದು ಬೆಳಗ್ಗೆ 6ರಿಂದ ಆ.8ರಂದು ಮಧ್ಯರಾತ್ರಿ 12ರವರೆಗೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಬದಲಿ ಮಾರ್ಗಗಳು: ರಾ.ಹೆ.-73(ಹಳೆ ರಾ.ಹೆ.234) ಮಂಗಳೂರು-ವಿಲ್ಲುಪುರಂ ರಸ್ತೆಯ 76 ಕಿ.ಮೀ.ನಿಂದ 86.20 ಕಿ.ಮೀ.ವರೆಗಿನ ಚಾರ್ಮಾಡಿ ಘಾಟ್ ಭಾಗದ ವಾಹನ ಸಂಚಾರವನ್ನು ನಿಷೇಧಿಸಿದ್ದು, ಉಜಿರೆ- ಧರ್ಮಸ್ಥಳ- ಕೊಕ್ಕಡ- ಗುಂಡ್ಯ- ಶಿರಾಡಿ (ರಾ.ಹೆ-75) ಮುಖಾಂತರ ಸಂಚರಿಸಬಹುದಾಗಿದೆ.
ಮೂಡಿಗೆರೆ ಹ್ಯಾಂಡ್ ಪೋಸ್ಟ್- ಜನ್ನಾಪುರ- ಆನೆಮಹಲ್- ಶಿರಾಡಿ- ಗುಂಡ್ಯ (ರಾ.ಹೆ. 75) ಮುಖಾಂತರ ಸಂಚರಿಸಲು ಬದಲಿ ರಸ್ತೆ ವ್ಯವಸ್ಥೆ ಮಾಡಿ ಅವಕಾಶ ಕಲ್ಪಿಸಲಾಗಿದೆ ಜಿಲ್ಲಾಧಿಕಾರಿ ಆದೇಶ ತಿಳಿಸಿದೆ.







