ಕೊಲ್ಲಿಯಲ್ಲಿ ತನ್ನ ವಾಣಿಜ್ಯ ಹಡಗುಗಳಿಗೆ ಬೆಂಗಾವಲು: ಚೀನಾದ ಪರಿಶೀಲನೆ
ದುಬೈ, ಆ. 7: ತೈಲ ಟ್ಯಾಂಕರ್‌ಗಳ ಮೇಲೆ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಹಡಗು ಮಾರ್ಗಗಳನ್ನು ರಕ್ಷಿಸುವುದಕ್ಕಾಗಿ ಸಾಗರ ಮಿತ್ರಕೂಟವೊಂದನ್ನು ರಚಿಸುವ ಅಮೆರಿಕದ ಪ್ರಸ್ತಾವದ ಅಡಿಯಲಿ,್ಲ ಕೊಲ್ಲಿ ಜಲಪ್ರದೇಶದಲ್ಲಿ ಸಂಚರಿಸುವ ತನ್ನ ವಾಣಿಜ್ಯ ಹಡಗುಗಳಿಗೆ ಚೀನಾವು ಬೆಂಗಾವಲು ಒದಗಿಸಬಹುದಾಗಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಚೀನಾದ ರಾಯಭಾರಿ ನಿ ಜಿಯಾನ್ ಮಂಗಳವಾರ ಹೇಳಿದ್ದಾರೆ.
‘‘ಕೊಲ್ಲಿ ಜಲಪ್ರದೇಶದಲ್ಲಿ ಅತ್ಯಂತ ಅಸುರಕ್ಷಿತ ಪರಿಸ್ಥಿತಿ ಇದೆ ಎಂದು ಕಂಡು ಬಂದರೆ, ನಮ್ಮ ವಾಣಿಜ್ಯ ಹಡಗುಗಳಿಗೆ ನಮ್ಮ ನೌಕಾಪಡೆಯು ಬೆಂಗಾವಲು ನೀಡುವುದನ್ನು ನಾವು ಪರಿಶೀಲಿಸಲಿದ್ದೇವೆ’’ ಎಂದು ಅಬುಧಾಬಿಯಲ್ಲಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ನಿ ಜಿಯಾನ್ ನುಡಿದರು.
‘‘ಕೊಲ್ಲಿ ಬೆಂಗಾವಲು ವ್ಯವಸ್ಥೆಗಳಿಗೆ ಸಂಬಂಧಿಸಿದ ಅಮೆರಿಕದ ಪ್ರಸ್ತಾವವನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ’’ ಎಂದು ಚೀನಾ ರಾಯಭಾರ ಕಚೇರಿಯ ಪತ್ರವೊಂದು ತಿಳಿಸಿದೆ.
ಇರಾನ್‌ನೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಸಾಗರ ಮಾರ್ಗ ರಕ್ಷಣೆ ಮಿತ್ರಕೂಟಕ್ಕೆ ಸೇರ್ಪಡೆಗೊಳ್ಳುವಂತೆ ಅಮೆರಿಕವು ಇತರ ದೇಶಗಳನ್ನು ಒತ್ತಾಯಿಸುತ್ತಿದೆ.