ಉರುಗ್ವೆಯ ಸ್ಟಾರ್ ಫೊರ್ಲಾನ್ ಫುಟ್ಬಾಲ್ ವೃತ್ತಿ ಬದುಕಿಗೆ ವಿದಾಯ

ಮಾಂಟೆವಿಡಿಯೊ, ಆ.7: ಉರುಗ್ವೆ ಫುಟ್ಬಾಲ್ ತಂಡದ ಮಾಜಿ ಸ್ಟ್ರೈಕರ್ ಡಿಯಗೊ ಫೊರ್ಲಾನ್ ವೃತ್ತಿ ಬದುಕಿಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ.
21 ವರ್ಷಗಳ ವೃತ್ತಿ ಬದುಕಿನಲ್ಲಿ ಮೂರು ಖಂಡಗಳ ವಿವಿಧ ಕ್ಲಬ್‌ಗಳ ಪರ ಆಡಿದ್ದರು.
40ರ ಹರೆಯದ ಫೊರ್ಲಾನ್ 2015ರಲ್ಲಿ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿದ್ದರು. ಆದರೆ ವೃತ್ತಿಪರ ಫುಟ್ಬಾಲ್ ಕ್ಲಬ್ ತಂಡಗಳ ಪರ ಆಡುವುದನ್ನು ಮುಂದುವರಿಸಿದ್ದರು. 8 ಕ್ಲಬ್‌ಗಳ ಪರ ಆಡಿದ್ದ ಫೊರ್ಲಾನ್ ಒಟ್ಟು 525 ಪಂದ್ಯಗಳನ್ನು ಆಡಿದ್ದರು 222 ಗೋಲುಗಳನ್ನು ಸಂಪಾದಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕಿಚ್ಚೀ ಸ್ಪೋಟ್ಸ್ ಕ್ಲಬ್ ಪರ ಆಡುತ್ತಿದ್ದ ಫೊರ್ಲಾನ್ ಇಂದು ನಿವೃತ್ತಿ ಘೋಷಿಸಿದ್ದಾರೆ. ಈ ತಂಡದಲ್ಲಿ ಅವರು 7 ಪಂದ್ಯಗಳಲ್ಲಿ ಆಡಿದ್ದರು. 5 ಗೋಲು ಜಮೆ ಮಾಡಿದ್ದರು.
2016ರಲ್ಲಿ ಮುಂಬೈ ಸಿಟಿ ತಂಡದಲ್ಲಿ ಆಡಿದ್ದರು. 11 ಪಂದ್ಯಗಳಲ್ಲಿ 5 ಗೋಲು ಗಳಿಸಿದ್ದರು.
ಅರ್ಜೆಂಟೈನ್ ಕ್ಲಬ್ ಇಂಡಿಪೆಂಡೆಂಟ್ ತಂಡದಲ್ಲಿ 1997ರಲ್ಲಿ ವೃತ್ತಿಬದುಕು ಆರಂಭಿಸಿದ್ದ ಫೊರ್ಲಾನ್ ಯುರೋಪ್‌ನ ತಂಡಗಳಾದ ಮಾಂಚೆಸ್ಟರ್ ಯುನೈಟೆಡ್, ವಿಲ್ಲಾರಿಯಲ್, ಅಟ್ಲೆಟಿಕೊ ಮ್ಯಾಡ್ರಿಡ್ ಮತ್ತು ಇಂಟರ್ ಮಿಲಾನ್ ಪರ ಆಡಿದ್ದರು.
2010ರಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಉರುಗ್ವೆ ತಂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಟೂರ್ನಿಯಲ್ಲಿ 5 ಗೋಲುಗಳನ್ನು ಗಳಿಸಿದ್ದರು. ಗರಿಷ್ಠ ಗೋಲು ದಾಖಲಿಸಿದ್ದ ಫೊರ್ಲಾನ್ ಅತ್ಯುತ್ತಮ ಆಟಗಾರರಿಗೆ ನೀಡಲಾಗುವ ಗೋಲ್ಡನ್ ಬಾಲ್ ಪುರಸ್ಕಾರಕ್ಕೆ ಭಾಜನರಾಗಿದ್ದರು. ಉರುಗ್ವೆ ತಂಡ ನಾಲ್ಕನೇ ಸ್ಥಾನದೊಂದಿಗೆ ಫುಟ್ಬಾಲ್‌ನಲ್ಲಿ ಅಭಿಯಾನ ಕೊನೆಗೊಳಿಸಿತ್ತು.
ಉರುಗ್ವೆ ರಾಷ್ಟ್ರೀಯ ತಂಡದಲ್ಲಿ ಅವರು 2002ರಿಂದ 2014ರ ತನಕ ಆಡಿದ್ದರು. 112 ಪಂದ್ಯಗಳಲ್ಲಿ 36 ಗೋಲುಗಳನ್ನು ದಾಖಲಿಸಿದ್ದರು.
ಉರುಗ್ವೆ ಪರ ಗರಿಷ್ಠ ಗೋಲು ಜಮೆ ಮಾಡಿದ ಮೂರನೇ ಆಟಗಾರ ಫೊರ್ಲಾನ್. ಸುಯೆರೆಝ್ ಮತ್ತು ಎಡಿನ್ಸನ್ ಕವಾನಿ ಬಳಿಕದ ಸ್ಥಾನವನ್ನು ಫೊರ್ಲಾನ್ ಪಡೆದಿದ್ದಾರೆ.
‘‘21 ವರ್ಷಗಳ ಫುಟ್ಬಾಲ್ ವೃತ್ತಿಬದುಕಿಗೆ ನಿವೃತ್ತಿ ಘೋಷಿಸುವ ನಿರ್ಧಾರ ಕೈಗೊಂಡಿದ್ದೇನೆ’’ ಎಂದು ಫೊರ್ಲಾನ್ ಹೇಳಿದ್ದಾರೆ.
ಫೊರ್ಲಾನ್ ಇಂಡಿಪೆಂಡೆಂಟ್ ಕ್ಲಬ್ ಸೇರುವ ಮುನ್ನ ದಕ್ಷಿಣ ಅಮೆರಿಕದ ಹಲವು ಯೂತ್ ಕ್ಲಬ್‌ಗಳಲ್ಲಿ ಆಡಿದ್ದರು. ಇಂಡಿಪೆಂಡೆಂಟ್ ತಂಡದಲ್ಲಿ 80 ಪಂದ್ಯಗಳಲ್ಲಿ 37 ಗೋಲು ಗಳಿಸಿದ್ದರು. ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಪ್ರೀಮಿಯರ್ ಲೀಗ್ ಮತ್ತು ಎಫ್‌ಎ ಕಪ್‌ನ್ನು ಜಯಿಸಲು ನೆರವಾಗಿದ್ದರು.
2010ರಲ್ಲಿ ಅಟ್ಲಾಟಿಕೊ ತಂಡಕ್ಕೆ ಫುಲ್ಹಾಮ್ ವಿರುದ್ಧ ಯುರೋಪ್ ಲೀಗ್ ಗೆಲ್ಲಲು ನೆರವಾಗಿದ್ದರು. 2011ರಲ್ಲಿ ಉರುಗ್ವೆ ರಾಷ್ಟ್ರೀಯ ತಂಡದ ನಾಯಕರಾಗಿ ಕೊಪಾ ಅಮೆರಿಕ ಪ್ರಶಸ್ತಿ ಎತ್ತಿದ್ದರು. ಪೆರುಗ್ವೆ ವಿರುದ್ಧ ಫೈನಲ್‌ನಲ್ಲಿ 2 ಗೋಲು ದಾಖಲಿಸುವ ಮೂಲಕ ಉರುಗ್ವೆ ತಂಡಕ್ಕೆ 3-0 ಗೆಲುವಿಗೆ ನೆರವಾಗಿದ್ದರು. ಫೊರ್ಲಾನ್ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮುಂಬೈ ಸಿಟಿ ಪರ 2016ರಲ್ಲಿ ಮತ್ತು ಕಳೆದ ವರ್ಷ ಹಾಂಕಾಂಗ್ ಪ್ರೀಮಿಯರ್ ಲೀಗ್‌ನಲ್ಲಿ ಕಿಚ್ಚ್ಚೀ ಸ್ಪೋಟ್ಸ್ ಕ್ಲಬ್ ಪರ ಆಡಿದ್ದರು. ಕ್ಲಬ್ ಹಾಗೂ ರಾಷ್ಟ್ರೀಯ ತಂಡದಲ್ಲಿ ಒಟ್ಟು 637 ಪಂದ್ಯಗಳಲ್ಲಿ 258 ಗೋಲುಗಳನ್ನು ತಮ್ಮ ಖಾತೆಗೆ ಜಮೆ ಮಾಡಿದ್ದರು.







