ಶುಕ್ರವಾರ ಹಜ್ ಯಾತ್ರೆ ಆರಂಭ: 18 ಲಕ್ಷಕ್ಕೂ ಅಧಿಕ ಯಾತ್ರಿಗಳು ಸೌದಿಗೆ ಆಗಮನ

ಜಿದ್ದಾ (ಸೌದಿ ಅರೇಬಿಯ), ಆ. 8: ಜಗತ್ತಿನಾದ್ಯಂತದ ಮುಸ್ಲಿಮರು ಅತ್ಯಂತ ಭಯ ಭಕ್ತಿಯಿಂದ ನಿರ್ವಹಿಸುವ ಹಜ್ ಯಾತ್ರೆ ಶುಕ್ರವಾರ ಆರಂಭಗೊಳ್ಳಲಿದೆ.
ಶುಕ್ರವಾರ ಯಾತ್ರಿಗಳು ಮಿನಾದಲ್ಲಿ ನೆಲೆಸುತ್ತಾರೆ ಹಾಗೂ ಶನಿವಾರ ಅರಫಾತ್‌ನತ್ತ ಪ್ರಯಾಣಿಸಲಿದ್ದಾರೆ. ಯಾತ್ರೆಯು ಬುಧವಾರ ಕೊನೆಗೊಳ್ಳಲಿದೆ.
ಇಸ್ಲಾಮಿಕ್ ಕ್ಯಾಲೆಂಡರ್‌ನ ಅತ್ಯಂತ ಪವಿತ್ರ ವಾರದ ಅಂತಿಮ ಸಿದ್ಧತೆಗಳು ಆರಂಭಗೊಂಡಿರುವಂತೆಯೇ, 18 ಲಕ್ಷಕ್ಕೂ ಅಧಿಕ ಹಜ್ ಯಾತ್ರಿಗಳು ಸೌದಿ ಅರೇಬಿಯಕ್ಕೆ ಆಗಮಿಸಿದ್ದಾರೆ.
ಹಜ್ ಯಾತ್ರಿಗಳನ್ನು ಹೊತ್ತ ಅಂತರ್‌ರಾಷ್ಟ್ರೀಯ ವಿಮಾನಗಳು ಸೌದಿ ಅರೇಬಿಯಕ್ಕೆ ಬರುವುದು ಸೋಮವಾರ ಕೊನೆಗೊಂಡಿದೆ. ‘ಮಕ್ಕಾ ರೂಟ್ ಇನಿಶಿಯೇಟಿವ್’ ಅಡಿಯಲ್ಲಿ ಹಜ್ ಯಾತ್ರಿಗಳ ಅಂತಿಮ ತಂಡವನ್ನು ಹೊತ್ತ ವಿಮಾನವು ಬುಧವಾರ ಟ್ಯುನೀಶಿಯದಿಂದ ಸೌದಿ ಅರೇಬಿಯಕ್ಕೆ ಬಂದಿದೆ.
ಈ ಬಾರಿ ವಿಮಾನದ ಮೂಲಕ 17,25,455 ಹಜ್ ಯಾತ್ರಿಕರು, ರಸ್ತೆ ಮೂಲಕ 95,634 ಯಾತ್ರಿಗಳು ಮತ್ತು ಸಮುದ್ರ ಮಾರ್ಗದ ಮೂಲಕ 17,250 ಯಾತ್ರಿಗಳು ಆಗಮಿಸಿದ್ದಾರೆ ಎಂದು ಪಾಸ್‌ಪೋರ್ಟ್ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಒಟ್ಟಿಗೆ 25 ಲಕ್ಷಕ್ಕೂ ಅಧಿಕ ಹಜ್ ಯಾತ್ರಿಕರ ಆತಿಥ್ಯಕ್ಕಾಗಿ ಪವಿತ್ರ ನಗರ ಮಕ್ಕಾವು ಸಿದ್ಧತೆಗಳನ್ನು ನಡೆಸುತ್ತಿದೆ. 16 ಸರಕಾರಿ ಸಂಸ್ಥೆಗಳು ಯಾತ್ರಿಕರಿಗೆ 50 ವಿಧಗಳ ಸೇವೆಗಳನ್ನು ನೀಡುತ್ತಿವೆ.
► ಯಾತ್ರಿಕರ ನೆರವಿಗೆ 3.5 ಲಕ್ಷ ಮಂದಿ
ಯಾತ್ರಿಕರು ಹಜ್ ವಿಧಿವಿಧಾನಗಳನ್ನು ಸಮರ್ಪಕವಾಗಿ ನಡೆಸುವಂತಾಗಲು ಮಕ್ಕಾ ಮತ್ತು ಮದೀನಾ ನಗರಗಳ ಅಧಿಕಾರಿಗಳು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.
ಯಾತ್ರಿಕರಿಗೆ ನೆರವು ನೀಡಲು ಸರಕಾರವು 3.50 ಲಕ್ಷ ಜನರನ್ನು ನಿಯೋಜಿಸಿದೆ ಎಂದು ಮಕ್ಕಾ ಗವರ್ನರ್ ರಾಜಕುಮಾರ ಖಾಲಿದ್ ಅಲ್ ಫೈಝಲ್ ತಿಳಿಸಿದರು. ಅವರು ರವಿವಾರ ಮಕ್ಕಾ ಮತ್ತು ಇತರ ಪವಿತ್ರ ಸ್ಥಳಗಳಿಗೆ ರವಿವಾರ ಭೇಟಿ ನೀಡಿದರು.
ಹಜ್ ಭದ್ರತಾ ಪಡೆಗಳು ರವಿವಾರ ಆಂತರಿಕ ಸಚಿವ ರಾಜಕುಮಾರ ಅಬ್ದುಲ್ ಅಝೀಝ್ ಬಿನ್ ಸೌದ್ ಬಿನ್ ನಯೀಫ್ ಸಮ್ಮುಖದಲ್ಲಿ ಸೇನಾ ಕವಾಯತು ನಡೆಸಿದವು.
► ಮಕ್ಕಾ ರೂಟ್ ಇನಿಶಿಯೇಟಿವ್
ಮಕ್ಕಾ ರೂಟ್ ಇನಿಶಿಯೇಟಿವ್ ಯೋಜನೆಯಲ್ಲಿ ಹಜ್ ಯಾತ್ರಿಗಳ ಆರೋಗ್ಯ, ವೀಸಾ ಮತ್ತು ವಲಸೆ ತಪಾಸಣೆ ವಿಧಿವಿಧಾನಗಳು ಅವರ ಸ್ವದೇಶಗಳಲ್ಲಿಯೇ ನಡೆಯುತ್ತವೆ ಹಾಗೂ ಸೌದಿ ಅರೇಬಿಯಕ್ಕೆ ಕಾಲಿಡುತ್ತಿದ್ದಂತೆಯೇ ಅವರು ತಮ್ಮ ಬ್ಯಾಗ್‌ಗಳೊಂದಿಗೆ ಮಕ್ಕಾ ಮತ್ತು ಮದೀನಾಗಳಿಗೆ ನೇರವಾಗಿ ತೆರಳಬಹುದಾಗಿದೆ.
ಈ ಕಾರ್ಯಕ್ರಮದ ಪ್ರಯೋಜನವನ್ನು ಈ ವರ್ಷ ಟ್ಯುನೀಶಿಯ, ಮಲೇಶ್ಯ, ಇಂಡೋನೇಶ್ಯ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ 1.71 ಲಕ್ಷಕ್ಕೂ ಅಧಿಕ ಯಾತ್ರಿಗಳು ಪಡೆದುಕೊಂಡಿದ್ದಾರೆ.
ಇದು ಸೌದಿ ಅಧಿಕಾರಿಗಳ ಮೇಲಿನ ಹೊರೆಯನ್ನು ತಗ್ಗಿಸುತ್ತದೆ ಹಾಗೂ ಯಾತ್ರಿಗಳಿಗೆ ಸುಖಕರವಾದ ಅನುಭವವನ್ನು ಒದಗಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.