ತ್ರಿವಳಿ ತಲಾಕ್ ಬಿಲ್ ಪ್ರಶ್ನಿಸಿ ಪಿಐಎಲ್: 4 ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಆ.8: ಮುಸ್ಲಿಮರಲ್ಲಿ ಜಾರಿಯಲ್ಲಿದ್ದ ತ್ರಿವಳಿ ತಲಾಕ್ ನಿಷೇಧಿಸಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಮುಸ್ಲಿಮ್ ಮಹಿಳೆಯರ(ಮದುವೆ ಮೇಲಿನ ಹಕ್ಕಿನ ರಕ್ಷಣೆ) ಕಾಯ್ದೆ-2019ರ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ ಸರಕಾರಕ್ಕೆ ನಾಲ್ಕು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ನಿರ್ದೇಶಿಸಿದೆ.
ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಆರೀಫ್ ಜಮೀಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲ ರಹ್ಮತ್ಉಲ್ಲಾ ಕೊತ್ವಾಲ್ ಅವರು, ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾಯ್ದೆಯು ಸಂವಿಧಾನದ ಪರಿಚ್ಛೇದ 14, 15, 21 ಹಾಗೂ 25ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕಾಯ್ದೆಯ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಬೇಕು. ಈ ಕಾಯ್ದೆಯ ಜಾರಿಯಿಂದ ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ಪೀಠಕ್ಕೆ ತಿಳಿಸಿದರು.
ಮುಸ್ಲಿಂ ಮಹಿಳೆಯ ವೈವಾಹಿಕ ಜೀವನದ ಹಕ್ಕುಗಳ ಕಾಯ್ದೆಯು ಮದುವೆಯಾದ ಮುಸ್ಲಿಂ ಪುರುಷರ ದೌರ್ಜನ್ಯಕ್ಕೆ ದುರ್ಬಳಕೆಯಾಗುವ ಅಪಾಯವಿದೆ. ತ್ರಿವಳಿ ತಲಾಕ್ ಅನ್ನು ಘೋಷಿಸಿ 3 ವರ್ಷ ಸೆರೆವಾಸ ವಿಧಿಸುವಂತಹ ಬಿಗಿ ಕ್ರಮಗಳನ್ನು ಸಡಿಲಗೊಳಿಸಬೇಕು ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ನಾಲ್ಕು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತು.