ಧಾರ್ಮಿಕ ಭಾವನೆಗೆ ಅಡ್ಡಿಪಡಿಸಲ್ಲ: ನೂತನ ಕಮಿಷನರ್ ಹರ್ಷ
ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಡಾ.ಹರ್ಷ ಅಧಿಕಾರ ಸ್ವೀಕಾರ

ಮಂಗಳೂರು, ಆ.9: ದನ ಸಾಗಾಟ ತುಂಬ ಸೂಕ್ಷ್ಮ ವಿಚಾರವಾಗಿದ್ದು, ರಾಜ್ಯದಲ್ಲಿ ಕಾಲಕಾಲಕ್ಕೆ ಕಾನೂನು-ಕಟ್ಟಳೆ ರೂಪಿಸುತ್ತಿದ್ದು, ಕಾನೂನು ಪಾಲಿಸುತ್ತೇವೆ. ಜತೆಗೆ, ಯಾವುದೇ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ಪೊಲೀಸ್ ಇಲಾಖೆಯು ಅಡ್ಡಿಪಡಿಸುವುದಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರೇಟ್‌ನ ನೂತನ ಆಯುಕ್ತ ಡಾ.ಹರ್ಷ ಪಿ.ಎಸ್. ಸ್ಪಷ್ಟಪಡಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ನಂತರ ಆಯುಕ್ತರ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಕ್ರಮವಾಗಿ ದನ ಸಾಗಾಟಕ್ಕೆ ಅವಕಾಶವಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅದಕ್ಕೊಂದು ಆ್ಯಪ್‌ನ್ನು ಅಭಿವೃದ್ಧಿ ಪಡಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಯೋಜನೆಯು ಪೊಲೀಸ್ ಇಲಾಖೆಗೆ ಯಾವ ಆಯಾಮದಲ್ಲಿ ಸಹಾಯಕವಾಗುತ್ತದೆ ಎನ್ನುವ ರೀತಿಯಲ್ಲಿ ಪರಿಶೀಲನೆ ನಡೆಸಲಾಗುವುದು. ಬಳಿಕವೇ ಆ್ಯಪ್‌ನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಮಂಗಳೂರು ಆಯುಕ್ತರಾಗಿರುವುದು ಖುಷಿ ವಿಚಾರ. ದ.ಕ. ಜಿಲ್ಲೆಯ ಜನತೆ ಕಾನೂನು ಮೀರುವವರಲ್ಲ. ದ.ಕ. ಜಿಲ್ಲೆಯ ಚಾಲೆಂಜಿಂಗ್ ಆಗಿ ಸ್ವೀಕರಿಸುವೆ. ಕಾನೂನಿನ ಪರಿಧಿಯಲ್ಲಿ ಯಾವುದೇ ಸಂದರ್ಭದಲ್ಲೂ ಜನ ಸೇವೆಯೇ ಇಲಾಖೆಯ ಆದ್ಯ ಕರ್ತವ್ಯವಾಗಿದೆ ಎಂದರು.
ಮಂಗಳೂರು ನಗರ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ತಂಡವು ವಿಶೇಷ ಕಾಳಜಿ ವಹಿಸಲಿದೆ. ಜನಪರ ಹಾಗೂ ಜನಸ್ನೇಹಿ ಕಾನೂನು ಬದ್ಧವಾದ ಪೊಲೀಸ್ ವ್ಯವಸ್ಥೆಯನ್ನು ತರುವುದಾಗಿ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಸಮುದಾಯಗಳ ಮುಖಂಡರು, ಜನಪ್ರತಿನಿಧಿಗಳು, ಜನತೆಯ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಮಾದಕ ದ್ರವ್ಯ ನಿರ್ಮೂಲನೆ: ಯಾವುದೇ ನಗರವು ಬೆಳೆದಂತೆ, ಅದರ ಜತೆ ನಕಾರಾತ್ಮಕ ಅಂಶಗಳೂ ಸದ್ದಿಲ್ಲದೆ ತಲೆ ಎತ್ತುತ್ತವೆ. ನಗರದಲ್ಲಿನ ಅಪರಾಧ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯುತ್ತೇನೆ. ಎಂಡಿಎಂಎ, ಎಲ್‌ಎಸ್‌ಡಿ, ಗಾಂಜಾದಂತಹ ಮಾದಕ ದ್ಯವ್ಯ ನಿರ್ಮೂಲನೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಜತೆಗೆ, ಪರಿಣಾಮಕಾರಿ ಕಾನೂನು ಜಾರಿ ತರಲಾಗುವುದು ಎಂದು ಆಯುಕ್ತರು ವಿವರಿಸಿದರು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನೇ ಮಾದಕದ್ರವ್ಯ ಜಾಲವು ಟಾರ್ಗೆಟ್ ಮಾಡುತ್ತಿದೆ. ಈ ಬಗ್ಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಮಾದಕ ಜಾಲದ ಮೂಲವನ್ನು ಪತ್ತೆ ಹಚ್ಚಿ ಪೂರ್ಣ ಪ್ರಮಾಣದಲ್ಲಿ ಮಟ್ಟ ಹಾಕಲಾಗುವುದು. ಪೊಲೀಸ್ ಇಲಾಖೆಯು ಶಕ್ತಿ ಮೀರಿ ಸಮಾಜದ ಸುವ್ಯವಸ್ಥೆಗೆ ಪ್ರಾಧಾನ್ಯತೆ ನೀಡಲಾಗುವುದು ಎಂದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತರು, ಈ ಹಿಂದಿನ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಟ್ಕಾ, ರೌಡಿಸಂ, ಬೆಟ್ಟಿಂಗ್ ವಿರುದ್ಧ ಸಮರ ಸಾರಿದ್ದರು. ಅವರ ಹಿಂದಿನ ಆಯುಕ್ತರೂ ಕಠಿಣ ಶ್ರಮ ವಹಿಸಿದ್ದರು. ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಾ ಚರಣೆಗಿಳಿಯಲಾಗುವುದು ಎಂದರು.
ಯಾವುದೇ ನಗರದ ಸಾಮಾನ್ಯ ಪ್ರಜೆಗೆ ನೆಮ್ಮದಿ ಸಿಗಬೇಕಾದರೆ ಅಲ್ಲಿನ ಸಂಘಟಿತ ಅಪರಾಧಕ್ಕೆ ಕಡಿವಾಣ ಹಾಕಬೇಕು. ಮಂಗಳೂರು ಪೊಲೀಸ್ ಕಮಿಷನರೇಟ್‌ನ ಡಿಸಿಪಿಗಳ ಸಹಕಾರದೊಂದಿಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಸ್ಪಷ್ಟಪಡಿಸಿದರು.
ಉದ್ಯಮಿ ಸಿದ್ಧಾರ್ಥ ಸಾವು ಪ್ರಕರಣದ ಮರಣೋತ್ತರ ವರದಿಗೆ ಸಂಬಂಧಿಸಿದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ಉದ್ಯಮಿ ಸಿದ್ಧಾರ್ಥ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದ್ದು, ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ. ಪ್ರಕರಣವನ್ನು ವೈಯಕ್ತಿಕವಾಗಿ ಪರಿಶೀಲನೆ ನಡೆಸುತ್ತೇನೆ. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಲಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್, ಎಸಿಪಿಗಳಾದ ಶ್ರೀನಿವಾಸ ಗೌಡ, ಕೋದಂಡರಾಮ, ವಿನಯ ಗಾಂವ್ಕರ್, ಭಾಸ್ಕರ್ ಒಕ್ಕಲಿಗ, ಮಂಜುನಾಥ ಶೆಟ್ಟಿ ಮತ್ತಿತರರು ಉಪಸ್ಥಿರಿದ್ದರು.
ನೂತನ ಪೊಲೀಸ್ ಆಯುಕ್ತರ ಕುರಿತು
ಡಾ. ಹರ್ಷ ಪಿ.ಎಸ್. ಮೂಲತಃ ಕೋಟೆನಾಡು ಚಿತ್ರದುರ್ಗದವರು. ವೈದ್ಯಕೀಯ ಶಿಕ್ಷಣ ಪಡೆದ ಅವರು ಬಳಿಕ ಯುಪಿಎಸ್ಸಿ ಪರೀಕ್ಷೆಯ ಮೂಲಕ ವೃತ್ತಿಪರವಾಗಿ ಪೊಲೀಸ್ ಇಲಾಖೆಯತ್ತ ಮುಖಮಾಡಿದರು. ವೈದ್ಯಕೀಯ ಶಿಕ್ಷಣ ಪಡೆದ ತಕ್ಷಣ ನಾಗರಿಕ ಸೇವೆಯತ್ತ ಮುಖಮಾಡಿದ ಡಾ. ಹರ್ಷ 2014ನೇ ಐಎಎಸ್ ಬ್ಯಾಚ್‌ನಲ್ಲಿ ಸೇವೆಯನ್ನು ಆರಂಭಿಸಿದರು. ಪಶ್ಚಿಮ ಘಟ್ಟಗಳಲ್ಲಿ ಪ್ರಯಾಣಿಸಲು ಇಷ್ಟಪಡುವ ಬಹುಮುಖ ವ್ಯಕ್ತಿತ್ವದ ಡಾ.ಹರ್ಷ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಅತ್ಯಾಸಕ್ತಿ ಹೊಂದಿದ್ದಾರೆ.
ವೃತ್ತಿ ಜೀವನ ಆರಂಭದ ತರಬೇತಿ ವೇಳೆ ಕಲಬುರ್ಗಿಯಲ್ಲಿನ ಸಂಘಟಿತ ಅಪರಾಧಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಪುತ್ತೂರ ಎಎಸ್ಪಿಯಾಗಿ, ತುಮಕೂರು ಜಿಲ್ಲೆಗೆ ಜಿಲ್ಲಾ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ಪೊಲೀಸ್ ಕಮಿಷನರೇಟ್‌ನ ಮೂರು ವಲಯಗಳಾದ ಆಗ್ನೇಯ, ಈಶಾನ್ಯ, ಪೂರ್ವ ವಿಭಾಗಗಳಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದರು.
ಪೊಲೀಸ್ ಇಲಾಖೆ ಹೊರತುಪಡಿಸಿ, ಕರ್ನಾಟಕ ಪ್ರವಾಸ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿ ಕರ್ನಾಟಕವನ್ನು ನೈಜ ಪ್ರವಾಸೋದ್ಯಮ ತಾಣವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ತದನಂತರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಅಲ್ಲಿಯೂ ತಮ್ಮ ಛಾಪು ಮೂಡಿಸಿ, ಕೆಎಸ್ಸಾರ್ಟಿಸಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ತುಮಕೂರು ಜಿಲ್ಲೆಗೆ ಎಸ್ಪಿಯಾಗಿದ್ದ ವೇಳೆ ಪೊಲೀಸ್ ಕಲ್ಯಾಣ ಮತ್ತು ಇಲಾಖೆಯಲ್ಲಿ ನೂತನ ವಿಧಾನಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಮುಖ್ಯಮಂತ್ರಿ ಪದಕ ಪ್ರಶಸ್ತಿಗೆ ಭಾಜನರಾಗಿದ್ದರು. ಬೆಂಗಳೂರು ನಗರದ ಸುರಕ್ಷತೆ ಕಾಪಾಡುವಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ 2ನೇ ಬಾರಿ ಮುಖ್ಯಮಂತ್ರಿ ಪದಕ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.









