ಬೆಳ್ತಂಗಡಿ : ಭಾರೀ ಮಳೆಗೆ ಹಲವು ಪ್ರದೇಶಗಳು ಜಲಾವೃತ

ಬೆಳ್ತಂಗಡಿ: ತಾಲೂಕಿನಲ್ಲಿ ಭಾರೀ ಮಳೆಯಿಂದ ಸೇತುವೆಗಳು ಕೊಚ್ಚಿ ಹೋಗಿದ್ದು, ಹಲವು ಪ್ರದೇಶಗಳು ಜಲಾವೃತವಾಗಿ, ಸಂಪರ್ಕ ಕಡಿದುಕೊಂಡಿವೆ.
ನದಿಗಳು ಪಾತ್ರ ಬದಲಿಸಿ ಹರಿಯುತ್ತಿದ್ದು ಮನೆ ತೋಟಗಳಿಗೆ ನೀರು ನುಗ್ಗಿದೆ.
ಕುಕ್ಕಾವು ಸಮೀಪ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಕಾಲುಸಂಕ ಕೊಚ್ಚಿ ಹೋಗಿದ್ದು, ಸುಮಾರು 22ಕ್ಕೂ ಹೆಚ್ಚು ಮಹಿಳೆಯರು ಸಿಲುಕಿಕೊಂಡಿದ್ದಾರೆ. ಅವರನ್ನು ಹೊರತರಲು ತಾಲೂಕು ಆಡಳಿತ ಸ್ಥಳೀಯರ ಸಹಕಾರದೊಂದಿಗೆ ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ.
ಕಕ್ಕಿಂಜೆ ಪರ್ಲಾನಿಯಲ್ಲಿ ನದಿ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದ್ದು ಹಲವರು ಸಿಲುಕಿಕೊಂಡಿದ್ದಾರೆ
ಬಾಂಜಾರುಮಲೆಯ ಸೇತುವೆ ಕೊಚ್ಚಿ ಹೋಗಿದ್ದು ಅಲ್ಲಿನ ನಲವತ್ತು ಮಲೆಕುಡಿಯ ಕುಟುಂಬಗಳು ಸಂಪರ್ಕ ಕಳೆದುಕೊಂಡಿದೆ. ಎರಡು ಎನ್ ಡಿ ಆರ್ ಎಫ್ ತಂಡಗಳು ಬೆಳ್ತಂಗಡಿಗೆ ಆಗಮಿಸಿದ್ದು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
ಕಾಜೂರು, ಕೊಲ್ಲಿ ಪ್ರದೇಶಗಳು ಜಲಾವೃತವಾಗಿದ್ದು ಕಾಜೂರಿಗೆ ಸಂಪರ್ಕ ಕಲ್ಪಿಸುವ ಸೇತುವೆಯೊಂದು ತುಂಡಾಗಿ ಹೋಗಿದ್ದು, ಇದರಿಂದ ಜನರು ರಸ್ತೆಯಲ್ಲಿಯೇ ಬಾಕಿಯಾಗಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ತಹಶೀಲ್ದಾರ್ ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದಾರೆ.












