ಮೇಲ್ಸೇತುವೆ ಕಾಮಗಾರಿ ಬಿರುಕು ವದಂತಿ: ಕಂಗಾಲಾದ ಜನರು

ಉಳ್ಳಾಲ : ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಬಿರುಕು ಬಿಟ್ಟಿದೆ ಎನ್ನುವ ವದಂತಿ ಹಬ್ಬಿದ ಹಿನ್ನೆಲೆ ಬಹಳಷ್ಟು ಮಂದಿ ಹೆದರಿ ಕಂಗಾಲಾಗಿ ಮೇಲ್ಸೇತುವೆ ಮೂಲಕ ಸಂಚಾರ ನಿಲ್ಲಿಸಿದ ಘಟನೆ ತೊಕ್ಕೊಟ್ಟುವಿನಲ್ಲಿ ಶುಕ್ರವಾರ ನಡೆದಿದೆ.
ಶುಕ್ರವಾರ ಮಧ್ಯಾಹ್ನದ ವೇಳೆಗೆ ತೊಕ್ಕೊಟ್ಟು ಮೇಲ್ಸೇತುವೆ ಬಿರುಕು ಬಿಟ್ಟಿದ್ದು, ಮೇಲ್ಸೇತುವೆ ಮೇಲೆ ಜನ ಸೇರಿದ್ದಾರೆ ಎನ್ನುವ ವದಂತಿ ಹಬ್ಬಿತ್ತು.
ಇದರಿಂದ ಕಂಗಾಲಾದ ಬಹಳಷ್ಟು ಮಂದಿ ತೊಕ್ಕೊಟ್ಟು ಕಡೆ ಜಮಾಯಿಸಿದ್ದು, ವಿಚಾರಿಸಿದಾಗ ಸರಿಯಾದ ಮಾಹಿತಿ ಸಿಗದೇ ಹಿಂದಕ್ಕೆ ಬಂದಿದ್ದಾರೆ. ಮೇಲ್ಸೇತುವೆ ಬಿರುಕುಬಿಟ್ಟ ಬಗ್ಗೆ ಹಬ್ಬಿದ ವದಂತಿಯಿಂದ ಕೆಲವು ಅಧಿಕಾರಿಗಳು, ರಾಜಕೀಯ ಮುಖಂಡರು ಆಗಮಿಸಿ ಮೇಲ್ಸೇತುವೆ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಅರ್ಧದಲ್ಲಿ ಸ್ಥಗಿತಗೊಂಡು ಕೆಲವು ವರ್ಷಗಳ ಕಾಲ ಕಾಮಗಾರಿ ನಡೆಯದೇ ಬಾಕಿಯಾಗಿತ್ತು. ಇದರ ಪೂರ್ಣ ಕಾಮಗಾರಿ ಕೆಲಸ ಇತ್ತೀಚೆಗೆ ಮಾಡಿದ ಕಾರಣ ಕಾಮಗಾರಿಯಲ್ಲಿ ಕಳಪೆ ಮಾದರಿಯಾಗಿ ಬಿರುಕು ಬಿಟ್ಟಿರಬಹುದು ಎಂಬುದು ಕೆಲವರ ಲೆಕ್ಕಾಚಾರ ಕೂಡಾ ಇತ್ತು. ಇದೇ ಕಾರಣದಿಂದ ವದಂತಿ ಹಬ್ಬಿರಬೇಕೆಂದು ಶಂಕಿಸಲಾಗಿದೆ. ಒಟ್ಟಾರೆ ಜನರನ್ನು ಬೆಚ್ಚಿ ಬೀಳಿಸುವ, ಸವಾರರಲ್ಲಿ ಭೀತಿ ಹುಟ್ಟಿಸುವ ಕಾರ್ಯ ವದಂತಿಯಿಂದ ನಡೆಯಿತು.





