ಯೆಮನ್: ಆಹಾರ ವಿತರಣೆ ಕಾರ್ಯಕ್ರಮ ಮುಂದುವರಿಕೆ
ವಿಶ್ವ ಆಹಾರ ಕಾರ್ಯಕ್ರಮ ಘೋಷಣೆ

ಜಿನೇವ, ಆ. 9: ಯೆಮನ್ ರಾಜಧಾನಿ ಸನಾದಲ್ಲಿರುವ 8.50 ಲಕ್ಷ ಜನರಿಗೆ ಆಹಾರ ವಿತರಣೆ ಕಾರ್ಯಕ್ರಮವನ್ನು ಮುಂದಿನ ವಾರದಿಂದ ಪುನರಾರಂಭಿಸಲಾಗುವುದು ಎಂದು ವಿಶ್ವ ಆಹಾರ ಕಾರ್ಯಕ್ರಮ ಶುಕ್ರವಾರ ತಿಳಿಸಿದೆ.
ಬಂಡುಕೋರ ಸಂಘಟನೆ ಹೌದಿಯ ಅಧಿಕಾರಿಗಳೊಂದಿಗೆ ಒಪ್ಪಂದವೊಂದನ್ನು ಏರ್ಪಡಿಸಿಕೊಂಡ ಬಳಿಕ, ಎರಡು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದ್ದ ಆಹಾರ ವಿತರಣೆ ಮುಂದುವರಿಯಲಿದೆ.
ಸಂತ್ರಸ್ತ ಜನರಿಂದ ಆಹಾರವನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಭೀತಿಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಘಟಕವು ಜೂನ್ 20ರಂದು ಯೆಮನ್ ರಾಜಧಾನಿಯಲ್ಲಿ ಆಹಾರ ವಿತರಣೆಯನ್ನು ನಿಲ್ಲಿಸಿತ್ತು. ಆದರೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಗರ್ಭಿಣಿಯರು ಮತ್ತು ಹಾಲೂಡಿಸುತ್ತಿರುವ ತಾಯಂದಿರಿಗಾಗಿ ಪೌಷ್ಟಿಕ ಆಹಾರ ಪೂರೈಸುವ ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಹೇಳಿತ್ತು.
ಮುಂದಿನ ವಾರ ನಡೆಯಲಿರುವ ಬಕ್ರೀದ್ ಹಬ್ಬದ ಬಳಿಕ ಆಹಾರ ವಿತರಣೆ ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ವಿಶ್ವ ಆಹಾರ ಕಾರ್ಯಕ್ರಮ ತಿಳಿಸಿದೆ.
Next Story