‘ಒಂದು ದೇಶ, ಒಂದು ಪಡಿತರ ಚೀಟಿ’ಗೆ ನಾಲ್ಕು ರಾಜ್ಯಗಳಲ್ಲಿ ಚಾಲನೆ

ಹೊಸದಿಲ್ಲಿ, ಆ.9: ‘ಒಂದು ದೇಶ, ಒಂದು ಪಡಿತರ ಚೀಟಿ’ ಯೋಜನೆಯನ್ನು 2020,ಜೂ.1ರೊಳಗೆ ದೇಶಾದ್ಯಂತ ಜಾರಿಗೊಳಿಸುವ ತನ್ನ ಪ್ರಯತ್ನದ ಅಂಗವಾಗಿ ಕೇಂದ್ರ ಸರಕಾರವು ಶುಕ್ರವಾರ ತೆಲಂಗಾಣ-ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ-ಗುಜರಾತ್‌ಗಳ ನಡುವೆ ಪಡಿತರ ಚೀಟಿಯ ಅಂತರರಾಜ್ಯ ಪೋರ್ಟೆಬಿಲಿಟಿಗೆ ಚಾಲನೆ ನೀಡಿದೆ.
ಇದರಿಂದಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ವಾಸವಿರುವ ಫಲಾನುಭವಿಗಳು ತಮ್ಮ ಪಡಿತರ ಸಾಮಗ್ರಿಗಳನ್ನು ಇವೆರಡರ ಪೈಕಿ ಯಾವುದೇ ರಾಜ್ಯದ ನ್ಯಾಯಬೆಲೆ ಅಂಗಡಿಯಿಂದ ಪಡೆಯಬಹುದಾಗಿದೆ. ಇಂತಹ ಸೌಲಭ್ಯ ಮಹಾರಾಷ್ಟ್ರ ಮತ್ತು ಗುಜರಾತ್‌ಗಳ ನಿವಾಸಿಗಳಿಗೂ ಅನ್ವಯಿಸುತ್ತದೆ.
ಯೋಜನೆಗೆ ಚಾಲನೆ ನೀಡಿದ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು,ಇಂದು ಐತಿಹಾಸಿಕ ದಿನವಾಗಿದೆ. ತಲಾ ಎರಡು ರಾಜ್ಯಗಳನ್ನು ಜೊತೆಗೂಡಿಸಿ ಪಡಿತರ ಚೀಟಿಯ ಅಂತರರಾಜ್ಯ ಪೋರ್ಟೆಬಿಲಿಟಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಈ ನಾಲ್ಕು ರಾಜ್ಯಗಳಲ್ಲಿ ಅಂತಾರಾಜ್ಯ ಮತ್ತು ಅಂತರರಾಜ್ಯ ಪಡಿತರ ಚೀಟಿ ಪೋರ್ಟೆಬಿಲಿಟಿಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು.
ತನ್ಮಧ್ಯೆ ಹರ್ಯಾಣ. ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ರಾಜಸ್ಥಾನ ಮತ್ತು ತ್ರಿಪುರಾಗಳಲ್ಲಿ ಇಂಟ್ರಾ ಪೋರ್ಟೆಬಿಲಿಟಿಯನ್ನು ಪ್ರಾಯೋಗಿಕ ನೆಲೆಯಲ್ಲಿ ಜಾರಿಗೊಳಿಸಿದ್ದು,ಫಲಾನುಭವಿಗಳು ಆಯಾ ರಾಜ್ಯಗಳ ಯಾವುದೇ ನ್ಯಾಯಬೆಲೆ ಅಂಗಡಿಗಳಿಂದ ಪಡಿತರವನ್ನು ಪಡೆಯಬಹುದಾಗಿದೆ.
ಜನವರಿ 20ರೊಳಗೆ ಈ ಏಳು ರಾಜ್ಯಗಳಲ್ಲಿ ಪಡಿತರ ಚೀಟಿಯ ಅಂತರರಾಜ್ಯ ಪೋರ್ಟೆಬಿಲಿಟಿಯನ್ನು ಜಾರಿಗೊಳಿಸಲಾಗುವುದು ಮತ್ತು ಎಲ್ಲ 11 ರಾಜ್ಯಗಳನ್ನು ಒಂದು ಜಾಲವನ್ನಾಗಿ ರೂಪಿಸಲಾಗುವುದು ಹಾಗೂ ಫಲಾನುಭವಿಗಳು ಯಾವುದೇ ರಾಜ್ಯದಲ್ಲಿ ತಮ್ಮ ಪಡಿತರಗಳನ್ನು ಪಡೆಯಬಹುದಾಗಿದೆ ಎಂದು ಆಹಾರ ಕಾರ್ಯದರ್ಶಿ ರವಿಕಾಂತ ತಿಳಿಸಿದರು.







