ಫಲ್ಗುಣಿ ನದಿಯಲ್ಲಿ ಪ್ರವಾಹ: ಸ್ಥಳೀಯರಲ್ಲಿ ಹೆಚ್ಚಿದ ಭೀತಿ
ಭತ್ತದ ಗದ್ದೆ ಸಂಪೂರ್ಣ ಜಲಾವೃತ

ಮಂಗಳೂರು, ಆ.9: ನಗರದ ಹೊರವಲಯ ಗುರುಪುರ ಸಮೀಪದ ಫಲ್ಗುಣಿ ನದಿ ಉಕ್ಕಿ ಹರಿಯಲಾರಂಭಿಸಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ನೀರು ತುಂಬಿಕೊಂಡಿದೆ. ಪರಿಣಾಮ ಪ್ರವಾಹ ಹೆಚ್ಚಾಗಲಿದ್ದು, ನದಿ ತಟದ ಮನೆ-ಮಂದಿ ಭೀತಿ ಉಂಟಾಗಿದೆ.
ಫಲ್ಗುಣಿ ನದಿ ನೀರಿನ ಮಟ್ಟ ವಿಪರೀತ ಏರುಗತಿಯಲ್ಲಿದ್ದು, ಗುರುಪುರದ ಕುಕ್ಕುದಕಟ್ಟೆ, ಕಾರಮೊಗರು, ಅದ್ಯಪಾಡಿ ಇನ್ನಿತರ ತಗ್ಗುಪ್ರದೇಶಗಳಲ್ಲಿ ಈಗಾಗಲೇ ಪ್ರವಾಹ ಕಾಣಿಸಿಕೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಗಾಳಿ-ಮಳೆಯಿಂದ ಗುಡ್ಡ ಪ್ರದೇಶದಿಂದ ಪ್ರವಾಹೋಪಾ ದಿಯಲ್ಲಿ ನೀರು ಹರಿಯುತ್ತಿದೆ. ತೋಡುಗಳಲ್ಲಿ ಪ್ರವಾಹದಂತೆ ನೀರು ಹರಿಯಲಾರಂಭಿಸಿದೆ. ಒಂದೆರಡು ಕಡೆ ಪರಂಬೋಕು ತೋಡುಗಳ ತಡೆಗೋಡೆ ಜರಿದು, ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಕುಕ್ಕುದಕಟ್ಟೆಯಲ್ಲಿ ಮನೆಯೊಂದರ ಪಕ್ಕದಲ್ಲಿದ್ದ ಮಾವಿನ ಮರ ಉರುಳಿ ಬಿದ್ದಿದೆ. ಮನೆಗೆ ಯಾವುದೇ ಹಾನಿಯಾಗಿಲ್ಲ. ಮಠದಗುಡ್ಡೆಯಲ್ಲಿ ಒಂದು ತೇಗದಮರ ಉರುಳಿ ಬಿದ್ದಿದೆ. ಇದರಿಂದ ಒಳರಸ್ತೆಯಲ್ಲಿ ಒಂದು ತಾಸು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೆಲವೆಡೆ ಗುಡ್ಡದ ಮಣ್ಣು ಜರಿದಿದೆ.
ಗುರುಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 169ರ ಕುಕ್ಕುದಕಟ್ಟೆ, ಪರಾರಿ ಪ್ರದೇಶದಲ್ಲಿ ರಸ್ತೆ ಮೇಲೆ ಪ್ರವಾಹ ಹರಿಯುವ ಸಾಧ್ಯತೆಯಿದೆ. ಶುಕ್ರವಾರ ಸಂಜೆ ಹೆದ್ದಾರಿ ಸಮೀಪದ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ದೈವಸ್ಥಾನದ ಬಳಿ ಪ್ರವಾಹ ತುಂಬಿದ್ದುಮ, ಸ್ಥಳೀಯರಲ್ಲಿ ಭೀತಿ ಮುಗಿಲುಮುಟ್ಟಿದೆ.










