ಪ್ರವಾಹ ಪೀಡಿತರ ಪುನರ್ವಸತಿಗೆ ಎಷ್ಟೇ ಖರ್ಚಾದರೂ ಸೂಕ್ತ ವ್ಯವಸ್ಥೆ: ಯಡಿಯೂರಪ್ಪ

ಬೆಂಗಳೂರು, ಆ.10: ಪ್ರವಾಹ ಪೀಡಿತರ ರಕ್ಷಣೆ ಹಾಗೂ ಪುನರ್ ವಸತಿಗೆ ಎಷ್ಟೇ ಖರ್ಚಾದರು ತಕ್ಷಣ ಮಾಡುತ್ತೇನೆ. ಯಾರೊಬ್ಬರು ಎದೆಗುಂದುವ ಅಗತ್ಯವಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರವಾಹಪೀಡಿತ ಜಿಲ್ಲೆಗಳ ಪರಿಸ್ಥಿತಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಇಡೀ ರಾಜ್ಯದ ಜನತೆ ಹಾಗೂ ಸರಕಾರ ಪ್ರವಾಹ ಪೀಡಿತರ ಬೆನ್ನಿಗಿದೆ. ಸರಕಾರ ಇತರ ಕಾರ್ಯಕ್ರಮಗಳನ್ನು ಬದಿಗೊತ್ತಿಯಾದರೂ ಪ್ರವಾಹ ಪೀಡಿತರಿಗೆ ಪುನರ್‌ವಸತಿ ಕಲ್ಪಿಸಲು ಬದ್ಧ ಎಂದು ಭರವಸೆ ನೀಡಿದರು.
ರಾಜ್ಯದ ಅರ್ಧಭಾಗ ನೆರೆಯಿಂದ ತತ್ತರಿಸಿದ್ದು, ಕಳೆದ 45 ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭೀಕರ ಪ್ರವಾಹ ಕಂಡಿರಲಿಲ್ಲ. ಈವರೆಗೆ 16 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ಪ್ರವಾಹಕ್ಕೆ ಸಿಲುಕಿ 24 ಮಂದಿ ಸಾವನ್ನಪ್ಪಿದ್ದಾರೆ. ಇವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಒಟ್ಟು ರಾಜ್ಯದ 1,024 ಗ್ರಾಮಗಳು ಸಂಪೂರ್ಣವಾಗಿ ಮಳೆ ಪ್ರವಾಹಕ್ಕೆ ಸಿಲುಕಿವೆ. ಸುಮಾರು 2,35,105 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಇಲ್ಲಿಯವರೆಗೆ 624 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, 1,57,498 ಜನರು ಆಶ್ರಯ ಪಡೆದಿದ್ದಾರೆ. ಇವರಿಗೆ ಅಗತ್ಯ ಆಹಾರ, ಔಷಧಿ ಸೇರಿದಂತೆ ಮೂಲಭೂತ ಅಗತ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.







