'ವಿಶೇಷ ಚೇತನರ ಸಮಗ್ರ ಕಲ್ಯಾಣಕ್ಕೆ ಯೋಜನೆ ಅಗತ್ಯ'
ನ್ಯೂರೊ ಸ್ಪೆನ್ಸರಿ ಡೆವಲಪ್‍ಮೆಂಟ್ ಸಂಚಾರಿ ಘಟಕಕ್ಕೆ ಚಾಲನೆ

ಮಂಗಳೂರು: ವಿಶೇಷ ಚೇತನರ ಕಲ್ಯಾಣಕ್ಕೆ ಸಮಗ್ರ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ನವೀನ ಮಾದರಿಯ ನ್ಯೂರೊ ಸ್ಪೆನ್ಸರಿ ಡೆವಲಪ್‍ಮೆಂಟ್ ಸಂಚಾರಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಎಂಆರ್‍ಪಿಎಲ್ ಸಿಎಸ್‍ಆರ್ ಯೋಜನೆಯಡಿ 46 ಲಕ್ಷ ರೂಪಾಯಿ ವೆಚ್ಚದ ಘಟಕವನ್ನು ಸೇವಾಭಾರತಿಗೆ ವಿತರಿಸಲಾಗಿದೆ.
ಪ್ರಸ್ತುತ 25 ವರ್ಷ ಮೇಲ್ಪಟ್ಟ ವಿಶೇಷ ಚೇತನರ ಕಲ್ಯಾಣಕ್ಕೆ ಯಾವುದೇ ಯೋಜನೆಗಳಿಲ್ಲ. ಈ ವರ್ಗವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇಂಥ ವಿಶೇಷ ಯೋಜನೆ ಅಗತ್ಯ ಎಂಬ ಬಗ್ಗೆ ನಿಯೋಗದಲ್ಲಿ ತೆರಳಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗುವುದು ಎಂದು ವಿವರಿಸಿದರು.
ನಗರದಲ್ಲಿ ಸುಮಾರು 25 ಕೋಟಿ ರೂಪಾಯಿ ಅಂದಾಜು ವೆಚ್ಚದ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕೆ ನೆರವು ನೀಡಲು ಎಂಆರ್‍ಪಿಎಲ್ ತಾತ್ವಿಕ ಒಪ್ಪಿಗೆ ನೀಡಿದೆ. ಮಣಿಪಾಲದ ಎಂಐಟಿ ಕ್ರೀಡಾಸಂಕೀರ್ಣದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುವುದು. ದೇಸಿ ಕ್ರೀಡೆಗಳು ಸೇರಿದಂತೆ ಎಲ್ಲ ಪ್ರಮುಖ ಕ್ರೀಡೆಗಳಿಗೆ ಮೂಲಸೌಕರ್ಯ ಕಲ್ಪಿಸುವುದರಿಂದ ಈ ಭಾಗದ ಕ್ರೀಡಾ ಬೆಳವಣಿಗೆಗೆ ಬಹಳಷ್ಟು ಸಹಕಾರಿಯಾಗಲಿದೆ ಎಂದು ಹೇಳಿದರು.
ಎಂಆರ್‍ಪಿಎಲ್ ಮಾನವ ಸಂಪನ್ಮೂಲ ವಿಭಾಗದ ಸಮೂಹ ಪ್ರಧಾನ ವ್ಯವಸ್ಥಾಪಕ ಬಿ.ಎಚ್.ವಿ.ಪ್ರಸಾದ್ ಮಾತನಾಡಿ, "ಸಮಾಜದ ಒಳಿತಿಗಾಗಿ ಎಂಆರ್‍ಪಿಎಲ್ ಸದಾ ಶ್ರಮಿಸುತ್ತಾ ಬಂದಿದೆ. ಸೇವಾಭಾರತಿಯಂಥ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗೆ ಅಗತ್ಯ ನೆರವು ನೀಡಲಿದೆ" ಎಂದು ಭರವಸೆ ನೀಡಿದರು.
ವೆಂಕಟರಮಣ ದೇವಸ್ಥಾನ ಮಂಡಳಿ ಮ್ಯಾನೇಜಿಂಗ್ ಟ್ರಸ್ಟಿ ಸಿ.ಲಕ್ಷ್ಮಣ್ ಶಣೈ ಅಧ್ಯಕ್ಷತೆ ವಹಿಸಿದ್ದರು. ದಿವ್ಯಾಂಗರ ಸೇವೆ, ದೇವರ ಸೇವೆಗೆ ಸಮ ಎಂದು ಅವರು ಬಣ್ಣಿಸಿದರು. ಸೇವಾಭಾರತಿ ಅಧ್ಯಕ್ಷೆ ಸುಮತಿ ಶಣೈ, ಟ್ರಸ್ಟಿಗಳಾದ ವಿ.ವಿ.ಶಣೈ, ವಿನೋದ್ ಶಣೈ, ಪ್ರಮೀಳಾ, ಕೆ.ಆರ್.ಕಾಮತ್, ಅಶ್ವತ್ಥಾಮ, ಗಜಾಜಜ ಪೈ ಉಪಸ್ಥಿತರಿದ್ದರು. ಎಲುಬುರೋಗ ತಜ್ಞ ಹಾಗೂ ಸೇವಾ ಭಾರತಿ ಟ್ರಸ್ಟಿ ಡಾ.ಕೆ.ಆರ್.ಕಾಮತ್ ಸ್ವಾಗತಿಸಿ, ಉದ್ಯಮಿ ಮುಕುಂದ ಕಾಮತ್ ವಂದಿಸಿದರು.
ಸೇವಾಭಾರತಿ ಕಾರ್ಯದರ್ಶಿ ನಾಗರಾಜ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ತಾಲೂಕು ಮೊಂಟೆಪದವಿನಲ್ಲಿ ಆರು ಎಕರೆ ಜಮೀನನ್ನು ದಾನಿಯೊಬ್ಬರು ಸೇವಾಭಾರತಿಗೆ ನೀಡಿದ್ದು, ಇಲ್ಲಿ ಆರು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ವಿಶೇಷ ಚೇತನರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಅವರು ಪ್ರಕಟಿಸಿದರು.








