ಜಾತಿ ತಾರತಮ್ಯದ ವಿರುದ್ಧ ಹೋರಾಟವೇ ದಮನಿತರ ಹೋರಾಟ: ಚಿಂತಕ ಪ್ರೊ.ಆನಂದ ತೇಲ್‌ತುಂಬ್ಡೆ
ಬಿ.ವಿ ಕಕ್ಕಿಲ್ಲಾಯ ಶತಾಬ್ದಿ ಕಾರ್ಯಕ್ರಮ

ಮಂಗಳೂರು, ಆ.10: ಭಾರತದಲ್ಲಿ ದಮನಿತರ ಹೋರಾಟ ಎಂದರೆ ಅದು ವರ್ಗ ಸಂಘರ್ಷ ಮತ್ತು ಜಾತಿ ತಾರತಮ್ಯದ ವಿರುದ್ಧದ ಹೋರಾಟವಾಗಿದೆ ಎಂದು ಖ್ಯಾತ ಚಿಂತಕ ಪ್ರೊ.ಆನಂದ ತೇಲ್ ತುಂಬ್ಡೆ ತಿಳಿಸಿದ್ದಾರೆ.
ಬಿ.ವಿ. ಕಕ್ಕಿಲ್ಲಾಯ ಶತಾಬ್ದಿಯ ಅಂಗವಾಗಿ ಸಮದರ್ಶಿವೇದಿಕೆ ಮಂಗಳೂರು, ಎಂ.ಎಸ್. ಕ್ರಷ್ಣನ್ ಸ್ಮರಣ ಸಂಸ್ಥೆ, ಹೊಸತು ಮಾಸ ಪತ್ರಿಕೆ ಮತ್ತು ನವಕರ್ನಾಟಕ ಪ್ರಕಾಶನ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬಲ್ಮಠದ ಬಿಷಪ್ ಜತ್ತನ್ನ ಸಭಾಂಗಣ ಸಹೋದಯದಲ್ಲಿಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ದಮನಿತರ ಹೋರಾಟ ಮತ್ತು ಸಿದ್ದಾಂತ ಮತ್ತು ಕ್ರೀಯೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಕಾರ್ಲ್ ಮಾರ್ಕ್ಸ್ ಹಾಗೂ ಅಂಬೇಡ್ಕರ್ ರವರ ಅಂತಿಮ ಗುರಿ ಶೋಷಣೆ ಮುಕ್ತ ಮಾನವೀಯ ಸಮಾಜ ಆಗಿತ್ತು. ಅದೇ ರೀತಿ ಬುದ್ಧನ ಬೋಧನೆಯೂ ಶೋಷಣೆ ಮುಕ್ತ ಸಮಾಜದ ತತ್ವದ ಪ್ರತಿಪಾದನೆಯಾಗಿದೆ. ಆದರೆ ಅವರ ವಿಚಾರಗಳನ್ನು ಪ್ರತಿಪಾದಿಸಿದ ರೀತಿ ದಾರಿ ಮಾತ್ರ ಭಿನ್ನವಾಗಿದೆ ಎಂದು ತೇಲ್ ತುಂಬ್ಡೆ ತಿಳಿಸಿದ್ದಾರೆ.
ದಮನಿತರ ಪರವಾಗಿ ಹೋರಾಡುವ ಸಂಘಟನೆಗಳು ಮಾನವೀಯತೆಯ ಘನತೆಯನ್ನು ಎತ್ತಿ ಹಿಡಿಯುವ, ವರ್ಗ ಮತ್ತು ಜಾತಿಯ ಅಸಮಾನತೆಯನ್ನು ಮೀರುವ ಸಮಾಜವನ್ನು ಕಟ್ಟಲು ಸಂಘಟಿತರಾಗಬೇಕಾಗಿದೆ ಎಂದು ತೇಲ್‌ತುಂಬ್ಡೆ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಡಾ.ಕನ್ಹಯ್ಯಕುಮಾರ್ ಉಪಸ್ಥಿತರಿದ್ದರು. ಸಂಘಟಕರಾದ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಸ್ವಾಗತಿಸಿದರು.








