ಮಧ್ಯರಾತ್ರಿ ತಗ್ಗುಪ್ರದೇಶಗಳ ನೆರೆ ಪರಿಸ್ಥಿತಿ ವೀಕ್ಷಿಸಿದ ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಆ.10: ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಮತ್ತು ಬ್ರಹ್ಮಾವರಗಳ ತಗ್ಗು ಪ್ರದೇಶಗಳ ನೆರೆ ಪರಿಸ್ಥಿತಿಯ ಕುರಿತು ಖುದ್ದಾಗಿ ಪರಿಶೀಲಿಸಲು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಶುಕ್ರವಾರ ಮಧ್ಯರಾತ್ರಿ ಸುಮಾರಿಗೆ ಆ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿದರು.
ರಾತ್ರಿ 12:30ರಿಂದ 2:30ರವರೆಗೆ ಜಿಲ್ಲಾಧಿಕಾರಿ ಅವರು ಉಡುಪಿಯ ತಗ್ಗು ಪ್ರದೇಶಗಳಾದ ಉಪ್ಪೂರಿನ ಅನೇಕ ಕಡೆ ಹಾಗೂ ಬ್ರಹ್ಮಾವರ ನೀಲಾವರದ ಕುದ್ರುಗಳಿಗೆ ಭೇಟಿ ನೀಡಿ ಅಲ್ಲಿನ ಜನರು ತೊಂದರೆಗೊಳಗಾಗಿದ್ದಾರೆಯೇ ಎಂದು ಸ್ವತಹ ಪರಿಶೀಲಿಸಿದರು.
ಜಿಲ್ಲಾಧಿಕಾರಿ ಉಡುಪಿ ಹೊರವಲಯದ ಉಪ್ಪೂರು, ಕುದ್ರುಬೆಟ್ಟು, ನಡುಬೆಟ್ಟು, ಬ್ರಹ್ಮಾವರ ಬಾವಲಿಕುದ್ರು ಪ್ರದೇಶಗಳಿಗೆ ಭೇಟಿ ನೀಡಿದರು. ಇವೆಲ್ಲವೂ ತಗ್ಗುಪ್ರದೇಶಗಳಾಗಿದ್ದು, ಜಿಲ್ಲೆಯಲ್ಲಿ ಮೊದಲು ನೆರೆಗೆ ತುತ್ತಾಗುವ ಪ್ರದೇಶಗಳಾಗಿವೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಜನರಿಗೆ ಆಗುತ್ತಿರುವ ತೊಂದರೆ, ಸಮಸ್ಯೆಗಳ ಕುರಿತು ತಿಳಿದುಕೊಳ್ಳಲು ಅವರು ದಿಢೀರ್ ಆಗಿ ಭೇಟಿ ನೀಡಿದ್ದರು.
ಇಲ್ಲಿನ ಜನರ ಜೊತೆ ಸಂಪರ್ಕವಿಟ್ಟುಕೊಂಡು , ನೆರೆ ಸಂದರ್ಭದಲ್ಲಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಅಗತ್ಯ ಉಪಕರಣಗಳು ಹಾಗೂ ಪರಿಹಾರ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಂಡಿರುವಂತೆ ಜಿಲ್ಲಾಧಿಕಾರಿಗಳು ಬ್ರಹ್ಮಾವರದ ತಹಶೀಲ್ದಾರ್ ಕಿರಣ್ ಗೌರಯ್ಯರಿಗೆ ಸೂಚಿಸಿದರು.
ನಂತರ ಅವರು ಬ್ರಹ್ಮಾವರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ಅಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂನ ಕಾರ್ಯ ವೈಖರಿಯನ್ನು ಪರಿಶೀಲಿಸಿದರು. ಕೇಂದ್ರದ ಎಲ್ಲಾ ಸಿಬ್ಬಂದಿಗಳು ಕರ್ತವ್ಯದಲ್ಲಿ ತೊಡಗಿದ್ದನ್ನು ಕಂಡು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿರುವ ಕಾರಣ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಲು ಎಲ್ಲಾ ಸಿಬ್ಬಂದಿಗಳು ಸನ್ನದ್ದರಿರುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ನಿಶಾ ಜೇಮ್ಸ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಉಪಸ್ಥಿತರಿದ್ದರು.







