23ರಿಂದ 25: ಉಡುಪಿಯಲ್ಲಿ ರಾಜ್ಯ ಕಿರಿಯರ ಅಥ್ಲೆಟಿಕ್ ಕ್ರೀಡಾಕೂಟ
ಉಡುಪಿ, ಆ.10: ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ರಾದ್ಯ ಅಂತರ ಜಿಲ್ಲಾ ಕಿರಿಯರ (ಸಬ್‌ಜೂನಿಯರ್ ಮತ್ತು ಜೂನಿಯರ್) ಅಥ್ಲೆಟಿಕ್ ಕ್ರೀಡಾಕೂಟ ಆ.23ರಿಂದ 25ರವರೆಗೆ ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಉಡುಪಿ ಶಾಸಕ ಹಾಗೂ ಕ್ರೀಡಾಕೂಟ ಸಂಘಟನಾ ಸಮಿತಿಯ ಅಧ್ಯಕ್ಷ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕ್ರೀಡಾಕೂಟದಲ್ಲಿ ರಾಜ್ಯದ 30 ಜಿಲ್ಲಾ ತಂಡಗಳು 1500ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ನಿಟ್ಟೆ ಎಜ್ಯುಕೇಷನ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಕ್ರೀಡಾಕೂಟ 14,16,18 ಹಾಗೂ 20 ವರ್ಷದೊಳಗಿನ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ನಡೆಯಲಿದೆ ಎಂದರು.
ಕ್ರೀಡಾಕೂಟದಲ್ಲಿ 100 ಮಂದಿ ಅಧಿಕಾರಿಗಳು, 100ಕ್ಕೂ ಅಧಿಕ ಮಂದಿ ಸ್ವಯಂಸೇವಕರು ಭಾಗವಹಿಸಲಿದ್ದಾರೆ. ಕ್ರೀಡಾಕೂಟದ ಯಶಸ್ವಿಗಾಗಿ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದೂ ಅವರು ಹೇಳಿದರು.
ಇದರಲ್ಲಿ ರಾಜ್ಯದ ಎಲ್ಲಾ ನೊಂದಾಯಿತ ಜಿಲ್ಲಾ ಸಂಸ್ಥೆಗಳು ತಂಡಗಳನ್ನು ಕಳುಹಿಸಬಹುದಾಗಿದ್ದು, ಆ.16ರೊಳಗೆ ಎಲ್ಲಾ ಜಿಲ್ಲಾ ಸಂಸ್ಥೆಗಳು ತಮ್ಮ ಪ್ರವೇಶ ಪತ್ರವನ್ನು ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಗೆ ಕಳುಹಿಸಬೇಕಾಗಿದೆ ಎಂದು ರಾಜ್ಯ ಸಂಸ್ಥೆಯ ಕಾರ್ಯದರ್ಶಿ ರಾಜವೇಲು ತಿಳಿಸಿದರು.
ನಾಲ್ಕು ವಯೋಮಿತಿಯ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಒಟ್ಟು 130 ಸ್ಪರ್ಧೆಗಳು ನಡೆಯಲಿವೆ. ಈ ಕ್ರೀಡಾಕೂಟದಲ್ಲಿ ಸ್ಪರ್ಧಾಳುಗಳು ತೋರಿದ ಪ್ರದರ್ಶನದ ಆಧಾರದ ಮೇಲೆ ಸೆಪ್ಟಂಬರ್ ತಿಂಗಳು ಉಡುಪಿಯಲ್ಲೇ ನಡೆಯುವ ದಕ್ಷಿಣ ವಲಯ ಕಿರಿಯರ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ತಂಡದ ಆಯ್ಕೆ ನಡೆಯಲಿದೆ ಎಂದವರು ತಿಳಿಸಿದರು.
ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಸಂಸ್ಥೆಯ ಆಶ್ರಯದಲ್ಲೇ ದಕ್ಷಿಣ ವಲಯ ಕಿರಿಯರ ಕ್ರೀಡಾಕೂಟ ಸೆ.13ರಿಂದ 15ರವರೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರಲ್ಲಿ ಅಂಡಮಾನ್ ನಿಕೋಬಾರ್ ಸೇರಿದಂತೆ ದಕ್ಷಿಣ ಭಾರತದ ಎಂಟು ರಾಜ್ಯಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ರಘುಪತಿ ಭಟ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಸ್ಥೆಯ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಅಧ್ಯಕ್ಷ ರಘುರಾಮ ನಾಯಕ್, ಕಾರ್ಯದರ್ಶಿ ದಿನೇಶ್ ಕುಮಾರ್ ಎ, ಉಪಾಧ್ಯಕ್ಷ ಹರಿಪ್ರಸಾದ್ ರೈ, ಸಂಚಾಲಕ ಡಾ.ಕೆಂಪರಾಜ್ ಎಚ್.ಪಿ. ಉಪಸ್ಥಿತರಿದ್ದರು.







