ಮಲೇರಿಯಾ, ಡೆಂಗ್ ನಿಯಂತ್ರಣಕ್ಕೆ 7 ಕ್ಷಿಪ್ರ ತಂಡ: ಡಾ.ಅಶೋಕ್

ಉಡುಪಿ, ಆ.10: ಜಿಲ್ಲೆಯಲ್ಲಿ ಮಲೇರಿಯಾ ಮತ್ತು ಡೆಂಗ್ ಪ್ರಕರಣಗಳು ಕಡಿಮೆಯಾಗಿದ್ದು, ಎಲ್ಲೇ ಆದರೂ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಕಾರ್ಯೋನ್ಮುಖರಾಗಲು ಜಿಲ್ಲೆಯ ಎಲ್ಲಾ 7 ತಾಲೂಕುಗಳ ವ್ಯಾಪ್ತಿಯಲ್ಲಿ ಕ್ಷಿಪ್ರ ಸನ್ನದ್ದ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕ್ ಹೇಳಿದ್ದಾರೆ.
ಶನಿವಾರ, ಉಡುಪಿಯ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಕುರಿತ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಇದುವರೆಗೆ 53 ಮಲೇರಿಯಾ ಪ್ರಕರಣ ಮತ್ತು 105 ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲಾ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಸಂಪೂರ್ಣ ಗುಣಪಡಿಸಲಾಗಿದೆ. ಸಾರ್ವಜನಿಕರು ತಮ್ಮ ಪರಿಸರದ ಸುತ್ತಮುತ್ತ ಎಲ್ಲೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು.ರಾತ್ರಿ ವೇಳೆಯಲ್ಲಿ ಸೊಳ್ಳೆ ಪರದೆಗಳನ್ನು ಉಪಯೋಗಿಸುವಂತೆ ಹಾಗೂ ಯಾವುದೇ ಜ್ವರ ಬಂದಲ್ಲಿ ನಿರ್ಲಕ್ಷ ಮಾಡದೇ ಕೂಡಲೇ ಸಮೀಪದ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯುವಂತೆ ಅವರು ತಿಳಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಆರಂಭಿಸಿರುವ 7 ಕ್ಷಿಪ ತಂಡಗಳು, ಮಲೇರಿಯಾ ಮತ್ತು ಡೆಂಗ್ ಪ್ರಕರಣಗಳು ವರದಿಯಾದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿ ಅಗತ್ಯ ಚಿಕಿತ್ಸೆ ಮತ್ತು ನೆರವು ನೀಡಲಿವೆ ಎಂದು ಡಾ.ಅಶೋಕ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೋರ್ಡ್ ಹೈಸ್ಕೂಲ್‌ನ ಪ್ರಾಂಶುಪಾಲ ಸುರೇಶ್ ಭಟ್, ಕಿರಣ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸತೀಶ್ ಶೇಟ್, ಹರೀಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಇಲಾಖೆಯ ಶಿವಕುಮಾರ್ ಸ್ವಾಗತಿಸಿ, ವಂದಿಸಿದರು.
ವಸ್ತು ಪ್ರದರ್ಶನದಲ್ಲಿ ಡೆಂಗ್, ಮಲೇರಿಯಾ, ಕಾಂಗೊರೋ ಚಿಕಿತ್ಸೆ, ನೈರ್ಮಲ್ಯ, ಪೌಷ್ಠಿಕ ಆಹಾರ, ಜನನಿಶಿಶು ಆರೋಗ್ಯ , ರಕ್ತಹೀನತೆ ತಡೆಗಟ್ಟುವ ಬಗ್ಗೆ, ಕ್ಷಯರೋಗ ನಿಯಂತ್ರಣ, ಮಾನಸಿಕ ಆರೋಗ್ಯ, ತಾಯಿ ಕಾರ್ಡ್, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಶೌಚಾಲಯ ಬಳಕೆ, ಉಚಿತ ಆರೋಗ್ಯ ಸಹಾಯವಾಣಿ 104 ಮತ್ತಿತರ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿ ಸಿದ ಯೋಜನೆಗಳ ವಿವರಗಳು ಪ್ರದರ್ಶಿ ಸಲ್ಪಟ್ಟಿವೆ. ಆ.11ರವರೆಗೆ ವಸ್ತು ಪ್ರದರ್ಶನ ನಡೆಯಲಿದೆ.








