ಸ್ಥಳೀಯ ಭಾಷೆಗಳ ಸಂರಕ್ಷಣೆಗೆ ಲೇಖಕರ, ವಿದ್ವಾಂಸರ ಒತ್ತು

ಹೊಸದಿಲ್ಲಿ, ಆ.10: ಸಾಹಿತ್ಯ ಅಕಾಡೆಮಿಯು ಇಲ್ಲಿ ಆಯೋಜಿಸಿದ ಎರಡು ದಿನಗಳ ಅಖಿಲ ಭಾರತ ಸ್ಥಳೀಯ ಲೇಖಕರ ಮೇಳದಲ್ಲಿ 60ಕ್ಕೂ ಅಧಿಕ ಬುಡಕಟ್ಟು ಲೇಖಕರು ಮತ್ತು ವಿದ್ವಾಂಸರು ಸ್ಥಳೀಯ ಭಾಷೆಗಳ ಸಂರಕ್ಷಣೆ ಮತ್ತು ಪುನಃಶ್ಚೇತನಕ್ಕೆ ಒತ್ತು ನೀಡಿದ್ದಾರೆ.
ಭಾಷೆಗಳು ಸಮಾಜಗಳ ಸಂಸ್ಕೃತಿ ಮತ್ತು ಲೋಕಜ್ಞಾನಗಳನ್ನು ಸಂರಕ್ಷಿಸುವುದರಿಂದ ಅವುಗಳ ರಕ್ಷಣೆಯು ಮುಖ್ಯವಾಗಿದೆ ಎಂದು ಹೇಳಿದ ಸಾಹಿತ್ಯ ಅಕಾಡಮಿಯ ಕಾರ್ಯದರ್ಶಿ ಕೆ.ಶ್ರೀನಿವಾಸ ರಾವ್ ಅವರು,ವಿಶ್ವದಲ್ಲಿ ಮಾತನಾಡುತ್ತಿರುವ 6,700ಕ್ಕೂ ಅಧಿಕ ಭಾಷೆಗಳ ಪೈಕಿ ಶೇ.40ರಷ್ಟು ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆಯಿದೆ. ಭಾರತದಲ್ಲಿ 19,569 ಮಾತೃಭಾಷೆಗಳಿವೆ. ಈ ಪೈಕಿ ಕೇವಲ 121 ಭಾಷೆಗಳನ್ನು 10,000ಕ್ಕೂ ಅಧಿಕ ಜನರು ಮಾತನಾಡುತ್ತಾರೆ. ಭಾರತೀಯ ಭಾಷೆಗಳ ಕುರಿತು ನಡೆಸಲಾದ ಸಮೀಕ್ಷೆಯು ಮುಂದಿನ 50 ವರ್ಷಗಳಲ್ಲಿ ಶೇ.50ಕ್ಕೂ ಅಧಿಕ ಭಾರತೀಯ ಭಾಷೆಗಳು ಮಾಯವಾಗಲಿವೆ ಎಂಬ ಆತಂಕವನ್ನು ವ್ಯಕ್ತಪಡಿಸಿದೆ ಎಂದರು.
ಆಧುನಿಕ ಅಭಿವೃದ್ಧಿಯು ಭಾಷೆಗಳಿಗೆ ಹೆಚ್ಚು ಹಾನಿಯನ್ನುಂಟು ಮಾಡಿದೆ. ಇದರಿಂದಾಗಿ ವಿಶ್ವದಲ್ಲಿ ಪ್ರತಿ ಎರಡು ವಾರಗಳಿಗೆ ಒಂದು ಭಾಷೆಯು ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಮುಂಡಾರಿ,ಕುಡಖ್‌ನಂತಹ ಭಾಷೆಗಳು ನಿಧಾನವಾಗಿ ಅವನತಿಯ ಅಂಚಿಗೆ ಸರಿಯುತ್ತಿವೆ ಎಂದು ಸಂತಾಲಿ ಸಲಹಾ ಮಂಡಳಿಯ ಸಂಚಾಲಕ ಮದನ ಮೋಹನ ಸೊರೆನ್ ಕಳವಳ ವ್ಯಕ್ತಪಡಿಸಿದರು. ಅವರನ್ನು ಬೆಂಬಲಿಸಿದ ಒಡಿಯಾ ಕವಿ ಮತ್ತು ವಿದ್ವಾಂಸ ಸೀತಾಕಾಂತ ಮಹಾಪತ್ರಾ ಅವರು, ಬುಡಕಟ್ಟು ಭಾಷೆಗಳ ಸಂರಕ್ಷಣೆಗಾಗಿ ಸರಿಯಾದ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.







