ಅಕ್ರಮ ಜಾನುವಾರು ಸಾಗಾಟದ ಆರೋಪ: ನಾಲ್ವರ ಬಂಧನ

ಮಂಗಳೂರು, ಆ.10: ಹರ್ಯಾಣ ರಾಜ್ಯದಿಂದ ಕೇರಳಕ್ಕೆ ಅಕ್ರಮವಾಗಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ 24 ಕೋಣಗಳನ್ನು ನಂತೂರು ಬಳಿ ಪೊಲೀಸರು ತಡೆದು ನಿಲ್ಲಿಸಿ ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಶನಿವಾರ ನಡೆದಿದೆ.
ಹರ್ಯಾಣದ ಲಾರಿ ಚಾಲಕ ರಾಜೇಂದರ್, ಕಮಲ್ ಕುಮಾರ್, ಸಂಜಯ್ ಕುಮಾರ್, ಜೈ ಕಿಸನ್ ಬಂಧಿತ ಆರೋಪಿಗಳು.
ಆರೋಪಿಗಳು ಕೋಣಗಳನ್ನು ಮಾಂಸಕ್ಕಾಗಿ ಕ್ಯಾಲಿಕಟ್‌ಗೆ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಅಕ್ರಮ ದನ ಸಾಗಾಟ ಪತ್ತೆಯಾಗಿದೆ. ವಶಕ್ಕೆ ಪಡೆದ ಕೋಣಗಳನ್ನು ಪಜೀರು ಗೋ ಶಾಲೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಪೂರ್ವ (ಕದ್ರಿ) ಠಾಣೆಯ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸೈಗಳಾದ ಮಾರುತಿ, ನರೇಂದ್ರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
Next Story









