ಭಾರೀ ಮಳೆ: ಜಲಾವೃತಗೊಂಡ ಬಂಟ್ವಾಳ ಪೇಟೆ

ಬಂಟ್ವಾಳ, ಆ. 10: ಶುಕ್ರವಾರ ರಾತ್ರಿಯಿಂದೀಚೆಗೆ ನೇತ್ರಾವತಿ ನದಿ ಉಕ್ಕಿ ಹರಿದ ಪರಿಣಾಮ ಬಂಟ್ವಾಳ ಪೇಟೆ ಜಲಾವೃತಗೊಂಡಿತು. ಬಂಟ್ವಾಳ ತಾಲೂಕಿನಲ್ಲೂ ತಗ್ಗು ಪ್ರದೇಶಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಸುಮಾರು 300 ಕ್ಕಿಂತಲೂ ಅಧಿಕ ಮನೆಗಳು ಜಲಾವೃತಗೊಂಡವು. 1 ಸಾವಿರಕ್ಕೂ ಅಧಿಕ ಮಂದಿ ಬಾಧಿತರಾಗಿದ್ದು, 300 ಮಂದಿಯನ್ನು ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಮಾಹಿತಿ ನೀಡಿದ್ದಾರೆ.
ಶನಿವಾರ ಬೆಳಗ್ಗೆ ನೇತ್ರಾವತಿ 11.7 ಮೀಟರ್ ನಲ್ಲಿ ಹರಿಯುತ್ತಿದ್ದರೆ, ಸಂಜೆ 10.75 ಮೀಟರ್ ನಲ್ಲಿ ಹರಿಯುತ್ತಿತ್ತು. ಹೀಗಾಗಿ ನದಿ ತೀರದಲ್ಲಿ ಪ್ರವಾಹವೂ ರಾತ್ರಿ ವೇಳೆ ಇಳಿಮುಖವಾಗತೊಡಗಿದೆ. ಯಾರಿಗೂ ಜೀವಹಾನಿಯಾಗಿಲ್ಲ ಎಂದವರು ತಿಳಿಸಿದ್ದಾರೆ.
ಏನೇನಾಗಿದೆ ?
ಮಳೆಯಿಂದಾಗಿ ಬಂಟ್ವಾಳ ಪೇಟೆಯ ಚಟುವಟಿಕೆ ಸ್ತಬ್ದಗೊಂಡಿದ್ದರೆ, ಉಳಿದ ಪ್ರದೇಶಗಳಲ್ಲೂ ಜನಸಂಚಾರ ವಿರಳವಾಗಿತ್ತು. ತಾಲೂಕಿನಲ್ಲಿ 300 ಕ್ಕಿಂತಲೂ ಅಧಿಕ ಮನೆಗಳು ಜಲಾವೃತಗೊಂಡಿದೆ. ಸುಮಾರು 1 ಸಾವಿರಕ್ಕಿಂತಲೂ ಅಧಿಕ ಜನರು ಬಾಧಿತರಾಗಿದ್ದಾರೆ. 600 ಮಂದಿಯನ್ನು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. ಬಂಟ್ವಾಳ ಬೆಳ್ತಂಗಡಿ ಸಂಪರ್ಕ ರಸ್ತೆ, ನಾವೂರು, ಪಾಣೆಮಂಗಳೂರು, ಸಜಿಪನಡು,ಗ್ರಾಮಗಳಲ್ಲಿ ರಸ್ತೆ ಜಲಾವೃತಗೊಂಡಿದೆ. ಎನ್‍ಡಿಆರ್‍ಎಫ್‍ನ 13 ಮಂದಿಯ ಒಂದು ತಂಡ, ಕೋಸ್ಟ್ ಗಾರ್ಡ್ ಒಂದು ತಂಡ, ಹೋಂ ಗಾರ್ಡ್ ಒಂದು ತಂಡ, ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದರು.
ಜೈನರ ಪೇಟೆ 15, ಬಂಟ್ವಾಳ 15, ಸುಣ್ಣದ ಗೂಡು 35, ಆಲಡ್ಕದ 25, ತಲಪಾಡಿ 17, ಬೋಗೋಡಿ 6, ನಂದರಬೆಟ್ಟು 40, ನಾವೂರು 17, ಸಜೀಪ ನಡು 22 ಮನೆಗಳು, ನಂದಾವರದ ವಿನಾಯಕ ಶಂಕರನಾರಾಯಣ ದೇವಸ್ಥಾನ, ಅಜಿಲ ಮೊಗರು ದರ್ಗಾ, ಗೂಡಿನ ಬಳಿ, ಆಲಡ್ಕ ಮಸೀದಿ, ಶಾಲೆ, 6 ಅಂಗನವಾಡಿ ಶಿಕ್ಷಣ ಸಂಸ್ಥೆಗಳು, ಅಂಗಡಿ ಮುಂಗಟ್ಟು, ಮಳಿಗೆಗಳು, ಸೇರಿದಂತೆ 300 ಕ್ಕೂ ಅಧಿಕ ಕಡೆಗಳಿಗೆ ನೀರು ನುಗ್ಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.
ನೆರೆ ಸ್ಥಿತಿ ಗತಿಯ ಬಗ್ಗೆ ನಿಗಾ ಇರಿಸಿದ್ದು ಯಾವುದೇ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದವರು ಹೇಳಿದ್ದಾರೆ.









