ನೆರೆ ಸಂತ್ರಸ್ತರಿಗೆ ಸಾಂಕ್ರಾಮಿಕ ರೋಗದ ಭೀತಿ: ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಆಗ್ರಹ
ಬೆಂಗಳೂರು, ಆ. 10: ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ರಾಜ್ಯದ 17 ಜಿಲ್ಲೆಗಳ 80ಕ್ಕೂ ಅಧಿಕ ತಾಲೂಕುಗಳಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಇದೀಗ ಅನಾರೋಗ್ಯ ಮತ್ತು ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ.
ರಾಜ್ಯ ಸರಕಾರದಿಂದ ಸ್ಥಾಪಿಸಿರುವ ನಿರಾಶ್ರಿತರ ಗಂಜಿ ಕೇಂದ್ರಗಳಲ್ಲಿ ಊಟ ಮತ್ತು ಉಪಾಹಾರದ ವ್ಯವಸ್ಥೆಗಳಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಮಧ್ಯೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಜತೆಗೆ ಹಾಸಿಗೆ-ಹೊದಿಕೆಗಳಿಲ್ಲದೆ ಸಂತ್ರಸ್ತರು ಕೊರೆಯುವ ಚಳಿಯಲ್ಲಿ ದಿನದೂಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ನಿರಾಶ್ರಿತರ ಕೇಂದ್ರಗಳಲ್ಲಿ ಸೊಳ್ಳೆಗಳ ಕಾಟ ಮಿತಿಮೀರಿದ್ದು, ಜಂತುಗಳ ಕಾಟವೂ ಹೆಚ್ಚಾಗಿದೆ. ಸೂಕ್ತ ಶೌಚಾಲಯ ವ್ಯವಸ್ಥೆಯೂ ಇಲ್ಲ, ಸ್ನಾನಕ್ಕೂ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆಪಾದನೆ ಕೇಳಿಬಂದಿದೆ. ಅಲ್ಲದೆ, ಅನಾರೋಗ್ಯಕ್ಕೆ ಸೂಕ್ತ ವೈದ್ಯಕೀಯ ಸೌಲಭ್ಯವೂ ಇಲ್ಲ ಎಂಬುದು ಸಂತ್ರಸ್ತರ ಅಳಲಾಗಿದೆ.
ಎಡಬಿಡದೆ ಸುರಿಯುತ್ತಿರುವ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಟ್ಟೆ-ಬರೆಗಳೆಲ್ಲಾ ನೆಂದು ಮುದ್ದೆಯಾಗಿವೆ. ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ವೃದ್ಧರು ಮತ್ತು ಮಕ್ಕಳ ನರಳಾಟದ ಸಾಮಾನ್ಯವಾಗಿದೆ. ಸ್ಥಳಾಂತರಗೊಂಡ ಹಳ್ಳಿಗಳನ್ನು ಜನರನ್ನು ಹೊರತುಪಡಿಸಿದರೆ ಉಳಿದ ಹಳ್ಳಿಗಳ ಜನರ ಸಂಕಷ್ಟ ಹೇಳತೀರದಾಗಿದೆ.
ರಾಜ್ಯ ಸರಕಾರ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ಸ್ಥಳಾಂತರ, ನಿರಾಶ್ರಿತರಿಗೆ ಗಂಜಿ ಕೇಂದ್ರ ಸ್ಥಾಪಿಸಲು ಹಾಗೂ ಕಡಿತಗೊಂಡ ರಸ್ತೆ, ವಿದ್ಯುತ್ ಪುನರ್ ಸಂಪರ್ಕಕ್ಕೆ ಆದ್ಯತೆ ನೀಡಿದೆ. ಆದರೆ, ಸಾಂಕ್ರಾಮಿಕ ರೋಗದ ಭೀತಿ ಬಗ್ಗೆ ಗಮನಹರಿಸಿಲ್ಲ. ಹೀಗಾಗಿ ಕೂಡಲೇ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಆಸ್ಥೆ ವಹಿಸಬೇಕೆಂಬುದು ಸಂತ್ರಸ್ತರ ಆಗ್ರಹವಾಗಿದೆ.







