ಉನ್ನಾವೊ ಅತ್ಯಾಚಾರ ಪ್ರಕರಣ: 18 ಸಾಕ್ಷಿಗಳಿಗೆ ಗನ್ಮ್ಯಾನ್ ಭದ್ರತೆ ಒದಗಿಸಲು ಸಿಬಿಐ ಸೂಚನೆ

ಹೊಸದಿಲ್ಲಿ, ಆ.10: ಉನ್ನಾವೊ ಅತ್ಯಾಚಾರ ಪ್ರಕರಣದ 18 ಸಾಕ್ಷಿಗಳಿಗೆ ಗನ್ಮ್ಯಾನ್ ಭದ್ರತೆ ಒದಗಿಸುವಂತೆ ಸಿಬಿಐ ಆಯಾ ಜಿಲ್ಲಾಡಳಿತಕ್ಕೆ ಆದೇಶಿಸಿದೆ.
ಉನ್ನಾವೊ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ, ಶಾಸಕ ಕುಲ್ದೀಪ್ ಸೆಂಗರ್ನ ವಿರುದ್ಧ ಈ 18 ಸಾಕ್ಷಿಗಳು ಸಾಕ್ಷ್ಯ ಹೇಳಬೇಕಿದೆ. ಇವರ ಹೆಸರನ್ನು ಆಯಾ ಜಿಲ್ಲಾಡಳಿತಕ್ಕೆ ಸಿಬಿಐ ಒದಗಿಸಿದ್ದು ಇವರಿಗೆ ಗನ್ಮ್ಯಾನ್ ಭದ್ರತೆ ಒದಗಿಸುವ ಹೊಣೆ ಜಿಲ್ಲಾಡಳಿತದ್ದಾಗಿದೆ. ಇವರಲ್ಲಿ 15 ಸಾಕ್ಷಿಗಳು ಉನ್ನಾವೊದ ಮಖಿ ಗ್ರಾಮದವರಾಗಿದ್ದಾರೆ. ಒಬ್ಬ ಪತ್ರಕರ್ತನೂ ಸೇರಿದಂತೆ ಇತರ ಮೂವರು ಸಾಕ್ಷಿಗಳನ್ನು ಇತ್ತೀಚೆಗೆ ವಿಚಾರಣೆ ನಡೆಸಲಾಗಿತ್ತು. ಅಲ್ಲದೆ ಅತ್ಯಾಚಾರ ಸಂತ್ರಸ್ತೆಯ ವಕೀಲ ಹಾಗೂ ಇಬ್ಬರು ಪ್ರಮುಖ ಸಾಕ್ಷಿಗಳಿಗೆ ಸುಪ್ರೀಂಕೋರ್ಟ್ ಸೂಚನೆಯಂತೆ ಸಿಆರ್ಪಿಎಫ್ ಭದ್ರತೆ ಒದಗಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಓರ್ವ ಸದಸ್ಯನಿಗೆ ಸಿಆರ್ಪಿಎಫ್ ಬದಲು ಉತ್ತರಪ್ರದೇಶ ಪೊಲೀಸರು ಭದ್ರತೆ ಒದಗಿಸಿದ್ದಾರೆ ಎಂದು ದಿಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದ್ದು, ಈ ಬಗ್ಗೆ ವರದಿ ನೀಡುವಂತೆ ತನಿಖಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ.
ಮುಂದಿನ ವಿಚಾರಣೆಯನ್ನು ಆಗಸ್ಟ್ 19ಕ್ಕೆ ನಿಗದಿಗೊಳಿಸಲಾಗಿದ್ದು ಈ ವೇಳೆ, ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯ ತಿಹಾರ್ ಜೈಲಿನಲ್ಲಿರುವ ಅತ್ಯಾಚಾರ ಸಂತ್ರಸ್ತೆಯ ಸೋದರ ಮಾವನನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.