ಉಡುಪಿ: ಮಳೆಯಿಂದ ಹಲವು ಮನೆಗಳಿಗೆ ಹಾನಿ; ಜಾನುವಾರು ಬಲಿ

ಉಡುಪಿ, ಆ.11: ಕಳೆದ ಕೆಲವು ದಿನಗಳಿಂದ ಬೆಂಬಿಡದೆ ಸುರಿಯುತ್ತಿದ್ದ ಮಳೆ ಇಂದು ಕಡಿಮೆಯಾಗಿರುವುದರಿಂದ ಜಿಲ್ಲೆಯ ಜಲಾವೃತ ಪ್ರದೇಶಗಳು ಸಹಜ ಸ್ಥಿತಿಗೆ ಮರಳಿವೆ. ಆದರೂ ಕೆಲವು ಕಡೆಗಳಲ್ಲಿ ಮಳೆಗಾಳಿಗೆ ಮನೆ ಹಾನಿ ಹಾಗೂ ಜಾನುವಾರು ಬಲಿಯಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಲಕ್ಷ್ಮಣ್ ಶೆಟ್ಟಿ ಎಂಬವರ ಮನೆಯ ಜಾನುವಾರು ನೀರಿನ ತೋಡಿಗೆ ಬಿದ್ದು ಮೃತಪಟ್ಟಿದ್ದು, ಸುಮಾರು 48 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಅದೇ ರೀತಿ ಅಂಪಾರು ಗ್ರಾಮದ ಪಾವರ್ತಿ ಶೆಟ್ಟಿ ಮತ್ತು ಚಂದ್ರಾವತಿ ಎಂಬವರ ತೋಟಗಾರಿಕಾ ಬೆಳೆ ಹಾನಿ ಯಾಗಿದ್ದು, ಇದರಿಂದ ಕ್ರಮವಾಗಿ 40 ಸಾವಿರ ರೂ. ಮತ್ತು 10ಸಾವಿರ ರೂ. ನಷ್ಟ ಉಂಟಾಗಿದೆ. ಚಿತ್ತೂರು ಗ್ರಾಮದ ಅಕ್ಕಯ್ಯ ಶೆಟ್ಟಿ ಎಂಬವರ ಮನೆ ಬಿದ್ದು 50ಸಾವಿರ ರೂ., ಕೊರಗಮ್ಮ ಎಂಬವರ ಮನೆಗೆ ಹಾನಿಯಾಗಿ 40ಸಾವಿರ ರೂ., ವಾಗ್ದೇವಿ ಎಂಬವರ ಮನೆ ಬಿದ್ದು 50ಸಾವಿರ ರೂ. ನಷ್ಟ ಉಂಟಾಗಿದೆ. ಬೈಂದೂರು ತಾಲೂಕಿನ ಪಡುವರಿ ಗ್ರಾಮದ ದೊಂಬೆ ಎಂಬಲ್ಲಿ ತೀವ್ರ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿರುವ ಬಗ್ಗೆ ವರದಿಯಾಗಿದೆ.
ಬ್ರಹ್ಮಾವರ ತಾಲೂಕಿನ ಆನೆಹಳ್ಳಿ ಗ್ರಾಮದ ಹೇಮ ಶೆಟ್ಟಿ, ಕೊಕ್ಕರ್ಣೆ ಪೆಜ ಮಂಗೂರು ಗ್ರಾಮದ ಗೋವಿಂದ ಪೂಜಾರಿ, ನಾಲ್ಕೂರು ಗ್ರಾಮದ ಸುಬ್ರಾಯ ನಾಯ್ಕ ಮತ್ತು ಕೆಂಜೂರು ಗ್ರಾಮದ ಲಿಂಗ ನಾಯ್ಕ ಎಂಬವರ ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
ಆ.10ರಂದು ರಾತ್ರಿ ವೇಳೆ ಗಾಳಿಮಳೆಗೆ ಕಾರ್ಕಳ ತಾಲೂಕಿನ ಪೆರ್ಮುಂಡೆ ಸರಕಾರಿ ಶಾಲೆಯ ಹೆಂಚು ಹಾರಿ ಸುಮಾರು 50ಸಾವಿರ ರೂ. ಮತ್ತು ಆ.11ರಂದು ಕಾರ್ಕಳ ಕಾಳಿಕಾಂಬ ದೇವಸ್ಥಾನದ ಬಳಿಯ ಜಗದೀಶ್ ಆಚಾರ್ಯ ಎಂಬವರ ಮನೆಗೆ ಹಾನಿಯಾಗಿ 40ಸಾವಿರ ರೂ. ನಷ್ಟ ಉಂಟಾಗಿದೆ.







