ಫಲ್ಗುಣಿ ನದಿ ಪ್ರವಾಹ ಇಳಿಮುಖ

ಮಂಗಳೂರು, ಆ.11: ನಗರದ ಹೊರವಲಯ ಗುರುಪುರದಲ್ಲಿ ಫಲ್ಗುಣಿ ನದಿ ಪ್ರವಾಹ ಇಳಿಮುಖಗೊಂಡಿದೆ. ಗುರುಪುರ ನದಿ ಸಮೀಪದಲ್ಲಿ ಕೆಲವು ಮನೆಯವರು ಶನಿವಾರ ರಾತ್ರಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದು, ರವಿವಾರ ಬೆಳಗ್ಗೆ ಮನೆಗಳತ್ತ ಮರಳಿದ್ದಾರೆ.
ರವಿವಾರ ರಾತ್ರಿ ವೇಳೆಗೆ ಫಲ್ಗುಣಿ ನದಿ ಪ್ರವಾಹ ಸಂಪೂರ್ಣ ಕಡಿಮೆಯಾಗಿ, ನೀರು ನದಿಗೆ ಸೀಮಿತವಾಗಲಿದೆ. ಆದರೆ ಏರಿದ ವೇಗದಲ್ಲಿ ಪ್ರವಾಹ ಇಳಿಯದೆ ನಿಧಾನಗತಿಯಲ್ಲಿ ಪ್ರವಾಹ ಇಳಿಯುತ್ತಿದೆ. ಈಗ ಮಳೆ ಆರ್ಭಟವೂ ಕಡಿಮೆಯಾಗಿದೆ.
ರಕ್ಷಣಾ ಕಾರ್ಯಾಚರಣೆ: ಮಂಗಳೂರು ಸಮೀಪದ ಜಪ್ಪಿನಮೊಗರು ಹಾಗೂ ಕಣ್ಣೂರಿನಿಂದ ಬಿ.ಸಿ.ರೋಡ್‌ವರೆಗೆ ನೇತ್ರಾವತಿ ನದಿ ತೀರದಲ್ಲಿ ನೆರೆ ಹಾವಳಿಯಿಂದ ಸಮಸ್ಯೆಗೊಳಗಾದವರನ್ನು ಶಿಳ್ಳೆಖ್ಯಾತ ಸಮುದಾಯ ಯುವಕರು ತಮ್ಮ ತೆಪ್ಪದ ಮೂಲಕ ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನದಿ ಪ್ರವಾಹದಿಂದ ಸ್ವತಃ ಶಿಳ್ಳೆಖ್ಯಾತ ಸಮುದಾಯವೇ ತಮ್ಮ ಗುಡಿಸಲುಗಳನ್ನು ಕಳೆದುಕೊಂಡು ಗಂಜಿಕೇಂದ್ರಗಳಿಗೆ ಸ್ಥಳಾಂತರಗೊಂಡಿದೆ. ಆದರೆ ಇಷ್ಟಕ್ಕೆ ಸುಮ್ಮನಿರದ ಶಿಳ್ಳೆಖ್ಯಾತ ಸಮುದಾಯದ ಯುವಕರು ಸಮಸ್ಯೆಗಳಿಗೊಳಗಾದ ಇತರರನ್ನು ಕೂಡ ರಕ್ಷಣೆ ಮಾಡುವ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.
ರಕ್ಷಣಾ ಕಾರ್ಯಗಳಲ್ಲಿ ಕರಾವಳಿ ವೃತ್ತಿನಿರತ ಶಿಳ್ಳೆಖ್ಯಾತ ಸಂಘದ ಕಾರ್ಯದರ್ಶಿ ವೆಂಕಟೇಶ್, ರವಿ, ರಘು, ಶಿವಪ್ಪ, ನಾಗೇಶ, ಲಕ್ಷ್ಮಣ, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ಸುರಕ್ಷಿತ ತಾಣದಲ್ಲಿ ಸಂತ್ರಸ್ತರು: ಜಲ ಪ್ರವಾಹದಿಂದಾಗಿ ತತ್ತರಿಸಿದ ಕುಟುಂಬಗಳಿಗೆ ಈಗಾಗಲೇ ಪರಿಹಾರ ಕೇಂದ್ರಗಳಲ್ಲಿ ನೆಲೆ ಕಲ್ಪಿಸಲಾಗಿದೆ. ನೆರೆಪೀಡಿತ ಪ್ರದೇಶದಲ್ಲಿರುವ ಜನತೆಯನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದೆ. ಈಗಾಗಲೇ ಸಾವಿರಕ್ಕೂ ಅಧಿಕ ಮಂದಿಗೆ ಸುರಕ್ಷಿತ ತಾಣದಲ್ಲಿ ನೆಲೆ ಕಲ್ಪಿಸಲಾಗಿದೆ.
ಸಂತ್ರಸ್ತರ ನೆರವಿಗೆ ಜಿಲ್ಲೆಯ ಜನತೆ ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತಿದ್ದಾರೆ. ವಿವಿಧ ಸಂಘಟನೆಗಳು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿದ್ದು, ಅಗತ್ಯ ವಸ್ತುಗಳನ್ನು ಪೂರೈಸುತ್ತಿವೆ. ಮಂಗಳೂರಿನ ಕೆಪಿಟಿಯಲ್ಲಿ ಜಿಲ್ಲಾಡಳಿತದಿಂದ ಆರಂಭಿಸಲಾಗಿರುವ ನೆರೆ ಸಾಮಗ್ರಿ ಸಂಗ್ರಹಣಾ ಕೇಂದ್ರಕ್ಕೆ ವಿವಿಧ ಸಂಘಟನೆಗಳಿಂದ ಅಗತ್ಯ ಸಾಮಗ್ರಿಗಳು ಹರಿದುಬರುತ್ತಿವೆ. ಜಿಲ್ಲಾ ಪತ್ರಕರ್ತರ ಸಂಘ, ಶ್ರೀ ಪತಂಜಲಿ ಯೋಗ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ತಮ್ಮಿಂದಾದ ನೆರವು ನೀಡುವಲ್ಲಿ ನಿರತವಾಗಿವೆ.
ಸಂತ್ರಸ್ತರಿಗೆ ಆಹಾರ ಕಿಟ್: ರಾಜ್ಯ ಸರಕಾರದಿಂದ ಸಂತ್ರಸ್ತರಿಗೆ ವಿತರಿಸಲು ಜಿಲ್ಲೆಗೆ 2,000 ಆಹಾರ ಕಿಟ್‌ಗಳು ಬಂದಿವೆ. ಪ್ರತೀ ಕಿಟ್ ನಲ್ಲಿ 10 ಕೆ.ಜಿ. ಅಕ್ಕಿ, ತಲಾ 1 ಕೆಜಿ ತೊಗರಿ ಬೇಳೆ, ಉಪ್ಪು, ಸಕ್ಕರೆ, ಹಾಗೂ ಎಣ್ಣೆ ಇದ್ದು, ಈ ಕಿಟ್‌ಗಳನ್ನು ರವಿವಾರ ಆಯಾ ತಾಲೂಕಿನ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಸಂತ್ರಸ್ತರಿಗೆ ವಿತರಿಸಲಾಗಿದೆ.
ರಸ್ತೆ ತ್ಯಾಜ್ಯ ಸ್ವಚ್ಛಗೊಳಿಸಲು ಡಿಸಿ ಸೂಚನೆ: ಮಳೆ ತೀವ್ರತೆ ಕಡಿಮೆಯಾಗಿರುವುದರಿಂದ ಸಂಚಾರ ತಡೆಯಾಗಿದ್ದ ರಸ್ತೆಗಳಲ್ಲಿರುವ ಕಲ್ಲು, ಮಣ್ಣು, ಮರ ಮಟ್ಟುಗಳನ್ನು ಆದ್ಯತೆಯಲ್ಲಿ ತೆರವುಗೊಳಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೆದ್ದಾರಿ, ಮುಖ್ಯ ರಸ್ತೆ ಹಾಗೂ ಗ್ರಾಮಾಂತರ ರಸ್ತೆಗಳಲ್ಲಿ ಈಗಾಗಲೇ ನಿಂತಿರುವ ನೀರು ಇಳಿಮುಖವಾಗಿದೆ. ವಾಹನ ಸಂಚಾರ ಸುಗಮಗೊಳಿಸಲು ತ್ಯಾಜ್ಯ ತೆರವುಗೊಳಿಸಲು ಅಗತ್ಯ ಕಾರ್ಮಿಕರು ಮತ್ತು ಜೆಸಿಬಿಗಳನ್ನು ಬಳಸುವಂತೆ ಅವರು ಸಂಬಂದಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಅಲ್ಲದೆ, ಹಾನಿಗೊಂಡಿರುವ ಮನೆಗಳಿಗೆ ನಿಯಮಾನುಸಾರ ಕೂಡಲೇ ಪರಿಹಾರ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಕುಸಿಯುವ ಹಂತದಲ್ಲಿ ಬಜ್ಪೆ-ಮಂಗಳೂರು ರಾಜ್ಯ ಹೆದ್ದಾರಿ: ಕರಾವಳಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ರಸ್ತೆ ಸಂಪರ್ಕವು ಕಡಿತಗೊಂಡಿದೆ. ಇದೀಗ ಬಜ್ಪೆಯಿಂದ ವಿಮಾನ ನಿಲ್ದಾಣ ಮೂಲಕ ಮಂಗಳೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ಕುಸಿಯುವ ಹಂತದಲಿದ್ದು, ಸ್ಥಳೀಯರು, ವಾಹನ ಸವಾರರಲ್ಲಿ ಭೀತಿ ಉಂಟಾಗಿದೆ.
ರಾಜ್ಯ ಹೆದ್ದಾರಿ 67ರ ಬಜ್ಪೆ ಸಮೀಪದ ಅಂತೋನಿಕಟ್ಟೆ-ಕೆಂಜಾರು ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಗುಡ್ಡ ಕುಸಿದು ರಸ್ತೆಗೆ ಬಿದ್ದು, ಈ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಈಗಾಗಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಕಾಮಗಾರಿ ಸಂಜೆವರೆಗೆ ಪ್ರಗತಿಯಲ್ಲಿತ್ತು. ಸೋಮವಾರವೂ ಮಣ್ಣು ತೆರವು ಮುಂದುವರಿಯಲಿದೆ.
ರಸ್ತೆಯ ಒಂದು ಭಾಗ ಭೂ ಕುಸಿತ ಕಂಡಿದ್ದು, ಇದೀಗ ರಸ್ತೆಯ ಮತ್ತೊಂದು ಭಾಗ ಕೂಡ ಕುಸಿಯುವ ಭೀತಿಯಲ್ಲಿದೆ. ಈ ಹಿಂದೆ ಆ ಭಾಗದಲ್ಲಿ ಮಣ್ಣನ್ನು ಅಗೆದಿರುವುದರಿಂದ ರಸ್ತೆಯೇ ಸಂಪೂರ್ಣ ಕುಸಿಯುವ ಹಂತದಲ್ಲಿದೆ. ಇದರಿಂದಾಗಿ ಅಲ್ಲಿ ದಿನನಿತ್ಯ ಸಂಚರಿಸುವ ಪ್ರಯಾಣಿಕರಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಈ ರಸ್ತೆ ಕುಸಿತ ಕಂಡರೆ ವಿಮಾನ ನಿಲ್ದಾಣ- ಕಟೀಲು ರಸ್ತೆ ಕಡಿತವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.






.jpg)


