ರಾಜ್ಯದಲ್ಲಿ ಶೀಘ್ರವೇ ನಾರಿ ಅದಾಲತ್: ಶ್ಯಾಮಲಾ ಕುಂದರ್

ಉಡುಪಿ, ಆ.11: ರಾಷ್ಟ್ರೀಯ ಮಹಿಳಾ ಆಯೋಗದ ವತಿಯಿಂದ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ನಾರಿ ಅದಾಲತ್‌ನ್ನು ರಾಜ್ಯದಲ್ಲಿ ಶೀಘ್ರವೇ ನಡೆಸಲಾಗುವುದು ಎಂದು ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ.
ಅಲೆವೂರು ಮಹಿಳಾ ಸಂಘ ರಾಮಪುರ ಆಶ್ರಯದಲ್ಲಿ ಅಲೆವೂರು ಯುವಕ ಸಂಗದ ಸಹಯೋಗದೊಂದಿಗೆ ರವಿವಾರ ಆಯೋಜಿಸಲಾದ ಮಹಿಳೆ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕಿ ಭಾಗ್ಯಶ್ರೀ ಐತಾಳ್ ಮಾತನಾಡಿ, ಸಂಸಾರದ ಕಣ್ಣು ಎಂಬಂತೆ ಮನೆ ಮಂದಿಯ ಲಾಲನೆ, ಪಾಲನೆಯೊಂದಿಗೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುವ ಮಹಿಳೆ ತನ್ನ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸ್ತ್ರೀರೋಗ ತಜ್ಞೆ ಡಾ.ರಾಜಲಕ್ಷ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆಮ್ತೂರು ಯುವತಿ ಮಂಡಲ ಅಧ್ಯಕ್ಷೆ ಅನುಸೂಯ ಶೆಟ್ಟಿ, ಕಾಳಿಕಾಂಬಾ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣ ವಿ. ಆಚಾರ್ಯ, ಮಾರ್ಪಳ್ಳಿ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ, ಅಲೆವೂರು ಯುವಕ ಸಂಘದ ಅಧ್ಯಕ್ಷ ಉಮೇಶ್ ಸೇರಿಗಾರ್, ಗೌರವಾಧ್ಯಕ್ಷ ಆನಂದ ಸೇರಿಗಾರ್, ಅಲೆವೂರು ಮಹಿಳಾ ಸಂಘದ ಗೌರವಾಧ್ಯಕ್ಷೆ ಮಮತಾ ಶೆಟ್ಟಿಗಾರ್, ಅಧ್ಯಕ್ಷೆ ಮಲ್ಲಿಕಾ, ವಾರಿಜಾ ಶೆಟ್ಟಿ. ಸಂಘಟಕಿ ರಮಾ ಜೆ.ರಾವ್ ಉಪಸ್ಥಿತರಿದ್ದರು. ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕುಸುಮಾವತಿ ಹರೀಶ್ ಸ್ವಾಗತಿಸಿದರು. ವೀಣಾ ಜಯರಾಂ ವಂದಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.







