ಬಕ್ರೀದ್ ಭೋಜನಕೂಟ: ಕೇಂದ್ರದ ಆಹ್ವಾನ ತಿರಸ್ಕರಿಸಿದ ಜಮ್ಮುಕಾಶ್ಮೀರ ವಿದ್ಯಾರ್ಥಿಗಳು

ಹೊಸದಿಲ್ಲಿ, ಆ.11: ಬಕ್ರೀದ್ ಪ್ರಯುಕ್ತ ಆಯೋಜಿಸಲಾದ ಭೋಜನಕೂಟದಲ್ಲಿ ಪಾಲ್ಗೊಳ್ಳಲು ಕೇಂದ್ರ ಸರಕಾರದ ಸಂಪರ್ಕಾಧಿಕಾರಿ ನೀಡಿದ ಆಹ್ವಾನವನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ನಡೆಸುತ್ತಿರುವ ಜಮ್ಮುಕಾಶ್ಮೀರದ ವಿದ್ಯಾರ್ಥಿಗಳು ತಿರಸ್ಕರಿಸಿದ್ದಾರೆ.
ಅಲಿಗಢ ವಿವಿಗಾಗಿನ ಕೇಂದ್ರ ಸರಕಾರದ ಸಂಪರ್ಕಾಧಿಕಾರಿ ಸಂಜಯ್ ಪಂಡಿತಾ ಅವರು ನೀಡಿದ್ದ ಆಹ್ವಾನಕ್ಕೆ ಪ್ರತಿಕ್ರಿಯಿಸಿ ವಿದ್ಯಾರ್ಥಿಗಳು ರವಿವಾರ ಹೇಳಿಕೆಯೊಂದನ್ನು ಪ್ರಕಟಿಸಿದ್ದಾರೆ. ‘‘ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಹಾಗೂ ಪ್ರದೇಶದಲ್ಲಿ ದೂರವಾಣಿ, ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಳಿಸಿರುವ ದಿಲ್ಲಿಯ ವಂಚನಾತ್ಮಕ ನಡವಳಿಕೆಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿ ಭೋಜನಕೂಟವನ್ನು ಬಹಿಷ್ಕರಿಸಿರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ಭೋಜನಕೂಟಕ್ಕೆ ಆಹ್ವಾನ ನೀಡಿರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದು ಜಮ್ಮುಕಾಶ್ಮೀರದ ವಿದ್ಯಾರ್ಥಿಗಳು ಬಣ್ಣಿಸಿದ್ದಾರೆ. ಜಗತ್ತಿನ ಮುಂದೆ ಮಾನವೀಯತೆಯ ಸೋಗನ್ನು ಪ್ರದರ್ಶಿಸಲು ‘ಕ್ರೂರಿ ಆಡಳಿತ’ ನಡೆಸಿರುವ ಪ್ರಯತ್ನ ಇದಾಗಿದೆಯೆಂದು ಅದು ಹೇಳಿದೆ.
ಇತರ ರಾಜ್ಯಗಳಲ್ಲಿ ಅಧ್ಯಯನ ನಡೆಸುತ್ತಿರುವ ಜಮ್ಮುಕಾಶ್ಮೀರದ ವಿದ್ಯಾರ್ಥಿಗಳಿಗೆ ಬಕ್ರೀದ್ ಹಬ್ಬದ ಪ್ರಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಲು ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ನಿಯೋಜಿತ ಸಂಪರ್ಕಾಧಿಕಾರಿಗಳಿಗೆ ತಲಾ 1 ಲಕ್ಷ ರೂ. ಮಂಜೂರು ಮಾಡಿದ್ದಾರೆಂಬ ವರದಿಗಳನ್ನು ಉಲ್ಲೇಖಿಸಿರುವ ಹೇಳಿಕೆಯು, ಈ ಆಹ್ವಾನದ ಹಿಂದೆ ರಾಜಕೀಯ ಉದ್ದೇಶವಿರುವುದಾಗಿ ಟೀಕಿಸಿದೆ.
ರಾಜ್ಯಪಾಲರಿಗೆ ತಮ್ಮ ಮೇಲೆ ಯಾವುದೇ ಅನುಕಂಪವಿಲ್ಲವೆಂದು ಹೇಳಿಕೊಂಡಿರುವ ವಿದ್ಯಾರ್ಥಿಗಳು, ಭಾರತ ಸರಕಾರವು ಕೈಗೊಂಡಿರುವ ‘ಅಪ್ರಜಾಸತ್ತಾತ್ಮಕ ಕ್ರಮಗಳಿಗೆ ತಮ್ಮ ಬೆಂಬಲವನ್ನು ಪಡೆಯುವ ಉದ್ದೇಶದಿಂದ ಈ ಭೋಜನಕೂಟಕ್ಕೆ ಆಹ್ವಾನ ನೀಡಲಾಗಿದೆಯೆಂದು ವಿದ್ಯಾರ್ಥಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.







