ಹಬ್ಬದ ಸಂಭ್ರಮದಲ್ಲೂ ಮಾನವೀಯತೆ ಮೆರೆದ ಮುಸ್ಲಿಮ್ ಬಾಂಧವರು
ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹ

ಉಡುಪಿ, ಆ. ೧೨: ಗಂಗೊಳ್ಳಿಯ ಮುಸ್ಲಿಂ ಭಾಂಧವರು ತ್ಯಾಗ ಬಲಿದಾನದ ಸಂಕೇತದ ಹಬ್ಬವಾದ ಈದ್ ಉಲ್ ಅಝ ವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಹಬ್ಬದ ವಿಶೇಷ ನಮಾಜ್ ನೆರವೇರಿಸಿದರು.
ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಮುಝಮ್ಮಿಲ್ ನದ್ವಿ, ಮೋಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ವಹಾಬ್ ಸಾಹಬ್ ನದ್ವಿ, ಶಾಹಿ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಮತೀನ್ ಸಿದ್ದಿಕಿ ಹಾಗೂ ಸಲಫಿ ಮಸೀದಿಯಲ್ಲಿ ಮೌಲಾನಾ ತೌಫಿಕ್ ಉಮರಿ ಇವರು ಈದ್ ಖುದುಬ ಹಾಗೂ ನಮಾಜ್ ನೆರವೇರಿಸಿದರು. ಪರಸ್ಪರ ಆಲಿಂಗನಗೈದು ಈದ್ ಶುಭಾಶಯ ಹಂಚಿಕೊಂಡರು. ಅಗಲಿದವರ ಗೋರಿಗಳ ಬಳಿ ತೆರಳಿ ಪ್ರತ್ಯೇಕವಾಗಿ ವಿಶೇಷ ದುಆ ಮಾಡಲಾಯಿತು.
ಎಸ್ಪಿ ನಿಶಾ ಜೇಮ್ಸ್ ಗಂಗೊಳ್ಳಿಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದ್ದಾರೆ.
ಗುಂಪು ಹತ್ಯೆಯ ವಿರುದ್ಧ ಬ್ಯಾಡ್ಜ್ ಹಾಕಿ ನಮಾಜ್
ಈ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿದರು. ಗುಂಪು ಹತ್ಯೆಗಳ ವಿರುದ್ದ ಬ್ಯಾಡ್ಜ್ ಧರಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಗಂಗೊಳ್ಳಿ ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಬಿಗಿ ಬಂದೋಬಸ್ತು ಮಾಡಲಾಗಿತ್ತು.





