ಜಮ್ಮು-ಕಾಶ್ಮೀರದಲ್ಲಿ ಶಾಂತಿಯುತ ಈದ್ ಪ್ರಾರ್ಥನೆ

ಶ್ರೀನಗರ, ಆ.12: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370ನ್ನು ಕೇಂದ್ರ ಸರಕಾರ ರದ್ದುಪಡಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರ ಬೆಳಗ್ಗೆ ಕಾಶ್ಮೀರದ ವಿವಿಧ ಮಸೀದಿಗಳಲ್ಲಿ ಶಾಂತಿಯುತವಾಗಿ ಈದ್ ಪ್ರಾರ್ಥನೆ ನೆರವೇರಿದೆ.
ಕಾಶ್ಮೀರದಲ್ಲಿ ಯಾವುದೇ ಪ್ರದೇಶಗಳಲ್ಲಿ ಹೆಚ್ಚು ಜನರು ಸೇರಲು ಅವಕಾಶ ನೀಡಲಾಗಿಲ್ಲ. ಈದ್ ಪ್ರಾರ್ಥನೆ ಸಲ್ಲಿಸಲು ನೆರೆಯ ಮಸೀದಿಗೆ ತೆರಳಲು ಮಾತ್ರ ಅವಕಾಶವಿದೆ ಎಂದು ರವಿವಾರವೇ ಸ್ಪಷ್ಟಪಡಿಸಲಾಗಿತ್ತು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಅನಂತನಾಗ್,ಬಾರಾಮುಲ್ಲಾ, ಬದ್ಗಾಮ್, ಬಂಡಿಪೋರ್‌ನ ಎಲ್ಲ ಸ್ಥಳೀಯ ಮಸೀದಿಗಳಲ್ಲಿ ಶಾಂತಿಯುತವಾಗಿ ಈದ್ ಪ್ರಾರ್ಥನೆ ನೆರವೇರಿದೆ. ಬಾರಾಮುಲ್ಲಾದ ಓಲ್ಡ್‌ಟೌನ್‌ನ ಜಾಮಿಯಾ ಮಸೀದಿಯಲ್ಲಿ ಸುಮಾರು 10,000 ಮುಸ್ಲಿಂ ಬಾಂಧವರು ಈದ್ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಕಾಶ್ಮೀರ ಕಣಿವೆಯ ವಿವಿಧ ಭಾಗಗಳಲ್ಲಿ ಶಾಂತಿಯುತವಾಗಿ ಈದ್ ಪ್ರಾರ್ಥನೆ ನಡೆದಿದೆ ಎಂದು ಜಮ್ಮು-ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.





