5 ಸಾವಿರ ಕೋಟಿ ಬಿಡುಗಡೆಗೆ ದೇವೇಗೌಡರ ಆಗ್ರಹ
ನೆರೆ ಪ್ರವಾಹ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ

ಬೆಂಗಳೂರು, ಆ.12: ರಾಜ್ಯದ ಪ್ರವಾಹ ಪರಿಸ್ಥಿತಿ ಹಿನ್ನೆಲೆ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಜೊತೆಗೆ 5 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.
ಸೋಮವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜನ, ಜಾನುವಾರುಗಳಿಗೆ ಜೀವ ಹಾನಿಯಾಗಿದೆ. ಮನೆಗಳನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ತಕ್ಷಣಕ್ಕೆ 5 ಸಾವಿರ ಕೋಟಿ ರೂ.ಗಳನ್ನು ಪರಿಹಾರ ಕಾರ್ಯಗಳಿಗೆ ಬಿಡುಗಡೆ ಮಾಡಬೇಕು. ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆ.ಅಗತ್ಯಬಿದ್ದರೆ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದು ಅವರು ಹೇಳಿದರು.
ನೆರೆ ಸಂತ್ರಸ್ತರ ವಿಚಾರದಲ್ಲಿ ಸರಕಾರಕ್ಕೆ ಎಲ್ಲ ರೀತಿಯ ನೆರವು, ಸಹಕಾರ ನೀಡುತ್ತೇವೆ ಎಂದ ಅವರು, ಕೇಂದ್ರ ಸರಕಾರ ಕೂಡಲೇ ತುರ್ತು ನೆರವು ನೀಡಬೇಕು. ಅಲ್ಲದೆ, ಈ ಹಿಂದೆ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಪ್ರಧಾನಿ ಮೋದಿ ಅವರೇ ವೈಮಾನಿಕ ಸಮೀಕ್ಷೆ ನಡೆಸಿ 3 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಪ್ರಕಟಿಸಿ ರಾಜ್ಯಕ್ಕೂ ಅದೇ ರೀತಿಯ ಮಾದರಿ ಅನುಸರಿಸುವಂತೆ ಅವರು ಒತ್ತಾಯಿಸಿದರು.
ನೆರೆ ಪ್ರವಾಹ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿವೆ. ಅಷ್ಟೇ ಅಲ್ಲದೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅನಾರೋಗ್ಯ ಇದ್ದರೂ ಪ್ರವಾಹ ಪೀಡಿತ ಪ್ರೇದಶಗಳಿಗೆ ಭೇಟಿ ನೀಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಯಾರೂ ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಎಲ್ಲರೂ ಒಟ್ಟಾಗಿ ತೊಂದರೆಗೊಳಗಾಗಿರುವ ಜನರ ನೆರವಿಗೆ ಸ್ಪಂದಿಸೋಣ ಎಂದು ತಿಳಿಸಿದರು.







