ಬಾಳೆಹಣ್ಣು, ಮೊಟ್ಟೆಗಳಿಗೆ ದುಬಾರಿ ಮೊತ್ತ; ಹೋಟೆಲ್‌ಗಳು ವಿವರಣೆ ನೀಡಬೇಕು: ಪಾಸ್ವಾನ್

ಹೊಸದಿಲ್ಲಿ, ಆ.13: ಪಂಚತಾರಾ ಹೋಟೆಲ್‌ಗಳು ಬಾಳೆಹಣ್ಣು ಮತ್ತು ಮೊಟ್ಟೆಗಳಂತಹ ಆಹಾರ ವಸ್ತುಗಳಿಗೆ ಹಲವು ಪಟ್ಟು ಹೆಚ್ಚುವರಿ ಮೊತ್ತ ವಸೂಲು ಮಾಡುವುದು ನ್ಯಾಯಸಮ್ಮತವಲ್ಲದ ವ್ಯಾಪಾರ ಪದ್ಧತಿಯಾಗಿದೆ ಮತ್ತು ಕೇಂದ್ರ ಸರಕಾರ ಈ ಬಗ್ಗೆ ಸಂಬಂಧಪಟ್ಟ ಹೋಟೆಲ್‌ಗಳಿಂದ ವಿವರಣೆ ಕೇಳಲಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಂಗಳವಾರ ತಿಳಿಸಿದ್ದಾರೆ.
ಚಂಡೀಗಡದ ಪಂಚತಾರಾ ಹೋಟೆಲ್‌ನಲ್ಲಿ ಎರಡು ಬಾಳೆಹಣ್ಣುಗಳಿಗೆ 442ರೂ. ಪಡೆದ ವೀಡಿಯೊವನ್ನು ನಟ ರಾಹುಲ್ ಬೋಸ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದೇ ಮಾದರಿಯ ಇನ್ನೊಂದು ಪ್ರಕರಣದಲ್ಲಿ ಪಂಚತಾರಾ ಹೋಟೆಲ್‌ವೊಂದು ಎರಡು ಬೇಯಿಸಿದ ಮೊಟ್ಟೆಗಳಿಗೆ 1,700ರೂ. ವಸೂಲು ಮಾಡಿದ ದೂರನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಸಿಗುವ ಬಾಳೆಹಣ್ಣು, ಮೊಟ್ಟೆ ಮುಂತಾದ ವಸ್ತುಗಳಿಗೆ ದುಬಾರಿ ಹಣವನ್ನು ಪಡೆದುಕೊಳ್ಳುತ್ತಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ.
ನಾವು ಎರಡು ಗರಿಷ್ಟ ಚಿಲ್ಲರೆ ದರವನ್ನು ನಿಗದಿಪಡಿಸಲು ಅವಕಾಶ ನೀಡುವುದಿಲ್ಲ. ಸರಕಾರ ಇಂತಹ ಅಭ್ಯಾಸಗಳನ್ನು ತಡೆಯಲು ಸಂಸತ್‌ನಲ್ಲಿ ಇತ್ತೀಚೆಗೆ ಅಂಗೀಕಾರಗೊಂಡಿರುವ ಗ್ರಾಹಕ ರಕ್ಷಣೆ ಕಾಯ್ದೆಯಡಿ ಸೂಕ್ತ ನಿಯಮಗಳನ್ನು ರಚಿಸಲಿದೆ ಎಂದು ಪಾಸ್ವಾನ್ ತಿಳಿಸಿದ್ದಾರೆ.





