ಟೆಲಿಫೋನ್ ಕದ್ದಾಲಿಕೆ ಬಗ್ಗೆ ಆರು ತಿಂಗಳ ಹಿಂದೆಯೇ ಹೇಳಿದ್ದೆ: ಮಾಜಿ ಡಿಸಿಎಂ ಆರ್.ಅಶೋಕ್

ಬೆಂಗಳೂರು, ಆ. 14: ಟೆಲಿಫೋನ್ ಕದ್ದಾಲಿಕೆಯ ಬಗ್ಗೆ ನಾನು ಆರು ತಿಂಗಳ ಹಿಂದೆಯೆ ಹೇಳಿದ್ದೆ. ಅದೇ ವಿಚಾರವನ್ನು ಇದೀಗ ಮಾಜಿ ಸಚಿವ ಎಚ್.ವಿಶ್ವನಾಥ್ ಬಹಿರಂಗಪಡಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.
ಬುಧವಾರ ಇಲ್ಲಿನ ಡಾಲರ್ಸ್ ಕಾಲನಿಯಲ್ಲಿನ ಸಿಎಂ ನಿವಾಸದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲ ರಾಜಕಾರಣಿಗಳು, ಪತ್ರಕರ್ತರು ಸೇರಿದಂತೆ ಅನೇಕರ ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದು, ಇದು ಘೋರ ಅಪರಾಧ ಎಂದು ಟೀಕಿಸಿದರು.
ಮನಸೋ ಇಚ್ಛೆ ಟೆಲಿಫೋನ್ ಕದ್ದಾಲಿಕೆಗೆ ಅವಕಾಶವಿಲ್ಲ. ಫೋನ್ ಕದ್ದಾಲಿಕೆಗೆ ಕಾನೂನಿನಲ್ಲಿ ಶಿಕ್ಷೆ ವಿಧಿಸಬಹುದಾಗಿದೆ. ಕದ್ದಾಲಿಕೆ ಮಾಡಿದ ಸರಕಾರ ಈಗ ಇಲ್ಲ. ಈ ಬಗ್ಗೆ ಸಮಗ್ರ ತನಿಖೆಯನ್ನು ನಡೆಸುವ ಅಗತ್ಯವಿದೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.
ಬೆಂಗಳೂರು ನಗರದಲ್ಲಿ ಜಾಹೀರಾತು ಲಾಬಿ ದೊಡ್ಡಮಟ್ಟದಲ್ಲಿದ್ದು, ಮತ್ತೆ ಆ ಲಾಬಿ ತಲೆ ಎತ್ತಲು ಪ್ರಯತ್ನಿಸಿದೆ. ಜಾಹೀರಾತು ಫಲಕಗಳನ್ನು ಅಳವಡಿಸಲು ಪ್ರಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸುತ್ತೇವೆ ಎಂದರು.