ದ್ವಿಪತ್ನಿತ್ವ ಆರೋಪ: ಗುಜರಾತಿನ ಹಿರಿಯ ಅಧಿಕಾರಿ ಅಮಾನತು

ಅಹ್ಮದಾಬಾದ್, ಆ.14: ವಿವಾಹಿತರಾಗಿದ್ದರೂ ಅದನ್ನು ಮುಚ್ಚಿಟ್ಟು ತನ್ನನ್ನು ಎರಡನೇ ಮದುವೆಯಾಗಿ ವಂಚಿಸಿದ್ದಾರೆ ಎಂದು ದಿಲ್ಲಿ ಮೂಲದ ಮಹಿಳೆಯೋರ್ವರು ಆರೋಪಿಸಿರುವ ಹಿನ್ನೆಲೆಯಲ್ಲಿ ಗುಜರಾತ್ ಸರಕಾರವು ಹಿರಿಯ ಐಎಎಸ್ ಅಧಿಕಾರಿ ಗೌರವ್ ದಹಿಯಾ ಅವರನ್ನು ದ್ವಿಪತ್ನಿತ್ವದ ಆರೋಪದಲ್ಲಿ ಬುಧವಾರ ಸೇವೆಯಿಂದ ಅಮಾನತುಗೊಳಿಸಿದೆ. ಮುಖ್ಯಮಂತ್ರಿ ವಿಜಯ ರೂಪಾನಿ ಅವರು ಕಳೆದ ತಿಂಗಳು ರಚಿಸಿದ್ದ ತನಿಖಾ ಸಮಿತಿಯ ವರದಿಯ ಆಧಾರದಲ್ಲಿ ದಹಿಯಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು,ಅವರ ವಿರುದ್ಧ ಶಿಸ್ತುಕ್ರಮವನ್ನು ಜರುಗಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಜೆ.ಎನ್.ಸಿಂಗ್ ತಿಳಿಸಿದ್ದಾರೆ.
ತನಿಖಾ ಸಮಿತಿಯ ಎದುರು ಎರಡು ಬಾರಿ ಹಾಜರಾಗಿದ್ದ ದಹಿಯಾ ಮಹಿಳೆಯ ಆರೋಪವನ್ನು ಅಲ್ಲಗಳೆದಿದ್ದರು. ಮಹಿಳೆಯ ದೂರಿನ ಬಳಿಕ ಪೊಲೀಸರೂ ಪ್ರತ್ಯೇಕ ತನಿಖೆಯನ್ನು ನಡೆಸಿದ್ದರು.
ದಹಿಯಾ ತಾನು ಮೊದಲೇ ವಿವಾಹಿತನೆಂಬ ವಿಷಯವನ್ನು ಮುಚ್ಚಿಟ್ಟಿದ್ದರು. ತಮ್ಮಿಬ್ಬರ ಮದುವೆ ಫೆಬ್ರುವರಿ,2018ರಲ್ಲಿ ತಿರುಪತಿಯಲ್ಲಿ ನಡೆದಿದ್ದು,ಫೋಟೊಗಳು ಮತ್ತು ವೀಡಿಯೊಗಳು ತನ್ನ ಬಳಿಯಿವೆ. ಮೊದಲ ಪತ್ನಿಗೆ ಶೀಘ್ರ ವಿಚ್ಛೇದನ ನೀಡುವುದಾಗಿ ಅವರು ಸುಳ್ಳು ಹೇಳಿದ್ದರು. ಮದುವೆಯ ನೋಂದಣಿಗೆ ಆಗ್ರಹಿಸಿದಾಗ ಚಿತ್ರಹಿಂಸೆ ನೀಡಲು ಆರಂಭಿಸಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ತಿಂಗಳು ದಹಿಯಾ ಕೂಡ ಅರ್ಜಿ ಸಲ್ಲಿಸಿ ಮಹಿಳೆ ಸುಳ್ಳು ಹೇಳುತ್ತಿದ್ದಾಳೆ. ಆಕೆ ತನ್ನನ್ನು ಹನಿ ಟ್ರಾಪ್‌ನಲ್ಲಿ ಸಿಲುಕಿಸಿ ಬ್ಲಾಕ್ ಮೇಲ್ ಆರಂಭಿಸಿದ್ದಳು ಎಂದು ತಿಳಿಸಿದ್ದರು.
ಹಿಂದೆ ತಾವಿಬ್ಬರೂ ರಾಜಿಗೆ ಒಪ್ಪಿಕೊಂಡಿದ್ದೆವಾದರೂ ಆಕೆ ತನ್ನನ್ನು ಮದುವೆಯಾಗಿದ್ದೇನೆ ಎಂದು ಸುಳ್ಳು ಹೇಳುವ ಮೂಲಕ ತನಗೆ ಕಿರಕುಳ ನೀಡಲು ಆರಂಭಿಸಿದ್ದಳು ಎಂದು ಪೊಲೀಸರಿಗೂ ದಹಿಯಾ ತಿಳಿಸಿದ್ದರು.







