ಕಾಲೇಜಿನ ಕಂಪ್ಯೂಟರ್ ವ್ಯವಸ್ಥೆಗೆ ಹಾನಿ: ಭಾರತೀಯ ವಿದ್ಯಾರ್ಥಿಗೆ ಜೈಲು
ವಾಶಿಂಗ್ಟನ್, ಆ. 14: ನ್ಯೂಯಾರ್ಕ್‌ನ ಕಾಲೇಜೊಂದರ ಕಂಪ್ಯೂಟರ್ ಉಪಕರಣವನ್ನು ಉದ್ದೇಶಪೂರ್ವಕವಾಗಿ ಹಾಳುಗೈದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ 12 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಹಾಗೂ ಜೈಲಿನಿಂದ ಬಿಡುಗಡೆಯಾದ ಬಳಿಕ ಒಂದು ವರ್ಷದವರೆಗೆ ಅವನನ್ನು ನಿಗಾದಲ್ಲಿ ಇರಿಸಲಾಗುವುದು.
ಅದೇ ವೇಳೆ, ನಷ್ಟ ಪರಿಹಾರವಾಗಿ 58,471 ಡಾಲರ್ (ಸುಮಾರು 41.74 ಲಕ್ಷ ರೂಪಾಯಿ) ಮೊತ್ತವನ್ನು ಕಾಲೇಜಿಗೆ ನೀಡುವಂತೆಯೂ ಆ್ಯಲ್ಬನಿ ನಿವಾಸಿ 27 ವರ್ಷದ ವಿಶ್ವನಾಥ್ ಅಕುತೋಟಗೆ ಆದೇಶ ನೀಡಲಾಗಿದೆ ಎಂದು ಅಟಾರ್ನಿ ಗ್ರಾಂಟ್ ಜಾಕ್ವಿತ್ ಮಂಗಳವಾರ ತಿಳಿಸಿದರು.
ತನ್ನ ತಪ್ಪನ್ನು ಒಪ್ಪಿಕೊಂಡ ವಿಶ್ವನಾಥ್, ಫೆಬ್ರವರಿ 14ರಂದು ಆ್ಯಲ್ಬನಿಯ ಕಾಲೇಜ್ ಆಫ್ ಸೇಂಟ್ ರೋಸ್‌ನಲ್ಲಿರುವ 66 ಕಂಪ್ಯೂಟರ್‌ಗಳು, ಹಲವಾರು ಕಂಪ್ಯೂಟರ್ ಮೋನಿಟರ್‌ಗಳು ಮತ್ತು ಕಂಪ್ಯೂಟರ್ ಆಧಾರಿತ ಪೋಡಿಯಮ್‌ಗಳಿಗೆ ‘ಯುಎಸ್‌ಬಿ ಕಿಲ್ಲರ್’ ಸಾಧನವನ್ನು ತುರುಕಿಸಿ ಅವುಗಳಿಗೆ ಹಾನಿ ಮಾಡಿರುವುದಾಗಿ ಹೇಳಿದನು.
ಅವನನ್ನು ಫೆಬವರಿ 22ರಂದು ಬಂಧಿಸಲಾಗಿತ್ತು. ಅವನು ಭಾರತೀಯನಾಗಿದ್ದು, ವಿದ್ಯಾರ್ಥಿ ವೀಸಾದಲ್ಲಿ ಅಮೆರಿಕದಲ್ಲಿ ವಾಸಿಸುತ್ತಿದ್ದಾನೆ.