ಮಾರಾಟ ಪ್ರಮಾಣದಲ್ಲಿ ಭಾರೀ ಕುಸಿತ: ಪುರುಷರ ಒಳಉಡುಪು ತಯಾರಿಕಾ ಉದ್ಯಮಕ್ಕೆ ಹಿನ್ನಡೆ

ಮುಂಬೈ, ಆ.16: ಭಾರತದಲ್ಲಿ ವಿವಿಧ ಕ್ಷೇತ್ರಗಳು ಮುಖ್ಯವಾಗಿ ಆಟೋಮೊಬೈಲ್ ಕ್ಷೇತ್ರ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬ ಸುದ್ದಿಯ ನಡುವೆಯೇ ಪುರುಷರ ಒಳ ಉಡುಪು ತಯಾರಿಕಾ ಉದ್ಯಮವೂ ತೀವ್ರ ಹಿನ್ನಡೆ ಅನುಭವಿಸುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಜೂನ್ ತಿಂಗಳಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಒಳ ಉಡುಪುಗಳ ಮಾರಾಟ ಪ್ರಮಾಣದಲ್ಲಿ ತೀವ್ರ ಇಳಿಕೆ ದಾಖಲಾಗಿದೆ.
‘ಮೆನ್ಸ್ ಅಂಡರ್‍ವೇರ್ ಇಂಡೆಕ್ಸ್' ಅಥವಾ ಪುರುಷರ ಒಳ ಉಡುಪು ಸೂಚ್ಯಂಕವು ಅಮೆರಿಕಾದ ಫೆಡರಲ್ ರಿಸರ್ವ್ ಮಂಡಳಿಯ ಮಾಜಿ ಅಧ್ಯಕ್ಷ ಅಲನ್ ಗ್ರೀನ್ ಸ್ಪ್ಯಾನ್ ಅವರ ಪರಿಕಲ್ಪನೆಯಾಗಿದ್ದು, ಮೊದಲು 1970ರಲ್ಲಿ ಇದನ್ನು ಅವರು ಜಗತ್ತಿಗೆ ಪರಿಚಯಿಸಿದ್ದರು. ಪುರುಷರ ಒಳ ಉಡುಪು ಮಾರಾಟದಲ್ಲಿ ಕುಸಿತವು ದೇಶದ ಒಟ್ಟಾರೆ ಆರ್ಥಿಕತೆಯ ಸ್ಥಿತಿಯನ್ನು ಸೂಚಿಸುತ್ತದೆ ಎಂದೂ ಹೇಳಲಾಗಿದೆ. ಇದನ್ನು ಈಗ ಭಾರತಕ್ಕೂ ಅನ್ವಯಿಸಬಹುದು ಎಂಬುದು ತಜ್ಞರ ಅಬಿಪ್ರಾಯ.
ಭಾರತದ ನಾಲ್ಕು ಅತ್ಯಂತ ಪ್ರಮುಖ ಒಳ ಉಡುಪು ತಯಾರಿಕಾ ಸಂಸ್ಥೆಗಳ ಜೂನ್ ತಿಂಗಳಿಗೆ ಅಂತ್ಯಗೊಂಡ ತ್ರೈಮಾಸಿಕ ನಿರ್ವಹಣೆ ಗಮನಿಸಿದರೆ ಕಳೆದ ದಶಕದಲ್ಲಿಯೇ ಅತ್ಯಂತ ಕನಿಷ್ಠ ಪ್ರಗತಿ ಪ್ರಮಾಣ ದಾಖಲಾಗಿದೆ.
ಜಾಕಿ ಬ್ರ್ಯಾಂಡ್ ಒಳಉಡುಪುಗಳನ್ನು ಮಾರಾಟ ಮಾಡುವ ಪೇಜ್ ಇಂಡಸ್ಟ್ರೀಸ್ ಕೇವಲ ಶೇ 2ರಷ್ಟು ಪ್ರಗತಿ ದಾಖಲಿಸಿದ್ದು 2008ರಿಂದ ಇದು ಅತ್ಯಂತ ಕನಿಷ್ಠ ಪ್ರಗತಿ ಪ್ರಮಾಣವಾಗಿದೆ. ಅದೇ ರೀತಿ ಡಾಲರ್ ಇಂಡಸ್ಟ್ರೀಸ್ ಹಾಗೂ ವಿಐಪಿ ಕ್ಲೋಥಿಂಗ್ ಮಾರಾಟ ಪ್ರಮಾಣದಲ್ಲಿ ಕ್ರಮವಾಗಿ ಕೇವಲ ಶೇ 4 ಹಾಗೂ ಶೇ 20ರಷ್ಟು ಪ್ರಗತಿ ದಾಖಲಾಗಿದ್ದು ಲಕ್ಸ್ ಇಂಡಸ್ಟ್ರೀಸ್ ಮಾರಾಟ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಖರ್ಚು ಮಾಡಲು ಕೈಯ್ಯಲ್ಲಿರುವ ಆದಾಯ ಪ್ರಮಾಣ ಕುಸಿಯುತ್ತಿರುವುದರಿಂದ ಅಗತ್ಯ ವಸ್ತುಗಳನ್ನೂ ಖರೀದಿಸಲೂ ಜನರು ಹಿಂಜರಿಯುವಂತಾಗಿರುವುದೇ ಈಗಿನ ಬೆಳವಣಿಗೆಗೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಜವುಳಿ ಮಾರುಕಟ್ಟೆಯ ಶೇ 10ರಷ್ಟು ವ್ಯಾಪಾರ ಒಳ ಉಡುಪು ಕ್ಷೇತ್ರದ ಮಾರಾಟವಾಗಿದ್ದು ಈಗ ಈ ಉದ್ಯಮದ ವಹಿವಾಟು ರೂ 27,931 ಕೋಟಿಯಷ್ಟಿದೆ.