ಐಎಂಎ ಬಹುಕೋಟಿ ಹಗರಣ: ಮನ್ಸೂರ್ ಖಾನ್‌ಗೆ 14 ದಿನ ನ್ಯಾಯಾಂಗ ಬಂಧನ
ಬೆಂಗಳೂರು, ಆ.16: ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್‌ನ ಎಸ್‌ಐಟಿ ವಿಚಾರಣೆ ಮುಕ್ತಾಯವಾದ ಹಿನ್ನೆಲೆಯಲ್ಲಿ 1ನೆ ಸಿಸಿಎಚ್ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಎಸ್‌ಐಟಿ ಪರ ವಕೀಲರು, ನ್ಯಾಯಾಲಯಕ್ಕೆ ಮನ್ಸೂರ್‌ಖಾನ್ ಸ್ವ ಇಚ್ಛಾ ಹೇಳಿಕೆ ನೀಡುವುದಾಗಿ ಹೇಳಿದ್ದಾರೆ ಎಂದರು. ಈ ವೇಳೆ ಕೋರ್ಟ್ ಹಾಲ್‌ನಲ್ಲಿ ಮನ್ಸೂರ್‌ನನ್ನು ಈ ಬಗ್ಗೆ ನ್ಯಾಯಾಧೀಶರು ಪ್ರಶ್ನಿಸಿದಾಗ ನನಗೆ ಹೃದಯ ಸಮಸ್ಯೆ ಇದೆ. ಈ ಚಿಕಿತ್ಸೆ ಮುಗಿದ ನಂತರ ವಕೀಲರ ಜೊತೆ ಚರ್ಚೆ ಮಾಡಿ ಮ್ಯಾಜಿಸ್ಟ್ರೇಟ್ ಮುಂದೆ ಪ್ರಕರಣದ ಸ್ವ ಇಚ್ಛಾ ಹೇಳಿಕೆ ನೀಡುತ್ತೇನೆ ಎಂದರು. ಈ ವೇಳೆ ಎಸ್‌ಐಟಿ ಪರ ವಕೀಲರು, ಮನ್ಸೂರ್ ಇ-ಮೇಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲು ಕೋರ್ಟ್ ಅನುಮತಿ ಬೇಕು. ಈಗಾಗಲೇ ಅಮೆಜಾನ್ ಕ್ಲೌಡ್ ಸೇರಿ ನಾಲ್ಕು ಇಮೇಲ್ ಪರಿಶೀಲನೆ ನಡೆಸಿದ್ದಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಈ ವೇಳೆ ಮನ್ಸೂರ್ ಪರ ವಕೀಲರು, ಎಸ್‌ಐಟಿ ಅವರು ಎಫ್‌ಎಸ್‌ಎಲ್ ಯಾವೆಲ್ಲಾ ಮಾಹಿತಿಗಳನ್ನು ಇಮೇಲ್‌ನಿಂದ ತೆಗೆದುಕೊಳ್ಳುತ್ತಾರೋ ಅದರ ಒಂದು ಪ್ರತಿ ನಮಗೆ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು, ಎಸ್‌ಐಟಿ ವಿಚಾರಣೆಗೆ ಅಗತ್ಯ ಇಲ್ಲದ ಕಾರಣ 14 ದಿನ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದೆ.
ಕಳೆದ ಆ.3ರಂದು ಆರೋಪಿಯನ್ನು ಎಸ್‌ಐಟಿ ತಂಡ ನಡೆಸುವ ವಿಚಾರಣೆಗಾಗಿ 14 ದಿನಗಳ ಕಾಲ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಶುಕ್ರವಾರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.