ವಲಸೆ ವಿಭಾಗದೊಂದಿಗೆ ಕೆಲಸ ಮಾಡದಂತೆ ಗೂಗಲ್‌ಗೆ ಉದ್ಯೋಗಿಗಳ ಒತ್ತಾಯ
ಸಾನ್‌ಫ್ರಾನ್ಸಿಸ್ಕೊ, ಆ. 17: ಅಮೆರಿಕದ ಸುಂಕ ಮತ್ತು ಗಡಿ ರಕ್ಷಣೆ (ಸಿಬಿಪಿ) ಅಥವಾ ವಲಸೆ ಮತ್ತು ಸುಂಕ ಅನುಷ್ಠಾನ ಇಲಾಖೆಯೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಪಣತೊಡುವಂತೆ ಜಗತ್ತಿನ ತಂತ್ರಜ್ಞಾನ ದೈತ್ಯ ಗೂಗಲ್‌ನ ನೂರಾರು ಉದ್ಯೋಗಿಗಳು ಕಂಪೆನಿಗೆ ಕರೆ ನೀಡಿದ್ದಾರೆ.
ಅಮೆರಿಕದ ಗಡಿಗಳಲ್ಲಿ ಕಾನೂನು ಅನುಷ್ಠಾನದ ಉಸ್ತುವಾರಿ ಹೊತ್ತಿರುವ ಕೇಂದ್ರ ಸರಕಾರದ ಸಂಸ್ಥೆ ಸಿಬಿಪಿಯ ಕ್ಲೌಡ್ ಕಂಪ್ಯೂಟಿಂಗ್ ಗುತ್ತಿಗೆಗಾಗಿ ಬಿಡ್ ಸಲ್ಲಿಸದಂತೆ ‘ಗೂಗ್ಲರ್ಸ್ ಫಾರ್ ಹ್ಯೂಮನ್ ರೈಟ್ಸ್’ ಎಂದು ಕರೆಯಲ್ಪಡುವ ಗೂಗಲ್ ಉದ್ಯೋಗಿಗಳ ಒಂದು ವರ್ಗ ಕಂಪೆನಿಯನ್ನು ಒತ್ತಾಯಿಸಿದೆ.
ಈ ಗುತ್ತಿಗೆಗಾಗಿ ಬಿಡ್‌ಗಳನ್ನು ಆಗಸ್ಟ್ 1ರಂದು ಸಲ್ಲಿಸಬೇಕಾಗಿತ್ತು. ಅದಕ್ಕೆ ಗೂಗಲ್ ಬಿಡ್ ಹಾಕಿದೆಯೇ ಎನ್ನವುದು ಗೊತ್ತಾಗಿಲ್ಲ.
ಈ ಮನವಿಗೆ ಮಂಗಳವಾರ ಸಂಜೆಯ ವೇಳೆಗೆ 700ಕ್ಕೂ ಅಧಿಕ ಗೂಗಲ್ ಉದ್ಯೋಗಿಗಳು ಸಹಿ ಹಾಕಿದ್ದಾರೆ.
ವಲಸಿಗರಿಂದ ಅವರ ಮಕ್ಕಳನ್ನು ಪ್ರತ್ಯೇಕಿಸುವ ಸರಕಾರದ ನೀತಿಗಳು ಮತ್ತು ವಲಸಿಗರನ್ನು ಬಂಧಿಸಿಟ್ಟಿರುವ ಬಂಧನ ಕೇಂದ್ರಗಳ ಕಳಪೆ ಗುಣಮಟ್ಟವನ್ನು ವಿರೋಧಿಸಿ ಗೂಗಲ್ ಉದ್ಯೋಗಿಗಳು ಈ ಅಭಿಯಾನ ಕೈಗೊಂಡಿದ್ದಾರೆ.