ಕಾಶ್ಮೀರದಲ್ಲಿ ಭದ್ರತಾ ನಿರ್ಬಂಧಕ್ಕೆ ಇಸ್ಲಾಮಿಕ್ ಸಹಕಾರ ಸಂಘಟನೆ ಖಂಡನೆ

ಜಿದ್ದಾ, ಆ. 17: ‘‘ಕಾಶ್ಮೀರದಲ್ಲಿ ಈಗ ಜಾರಿಯಲ್ಲಿರುವ ಭದ್ರತಾ ನಿರ್ಬಂಧ ಮತ್ತು ಸಂಪರ್ಕ ತಡೆ’’ಯನ್ನು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಬಲವಾಗಿ ಖಂಡಿಸಿದೆ ಹಾಗೂ ಕಾಶ್ಮೀರಿಗಳಿಗೆ ಧಾರ್ಮಿಕ ಸ್ವಾತಂತ್ರ್ಯ ವನ್ನು ನಿರಾಕರಿಸಲಾಗುತ್ತಿದೆ ಎಂದು ಅದು ಆರೋಪಿಸಿದೆ.
‘‘ಕಾಶ್ಮೀರದಲ್ಲಿ ಈಗ ಚಾಲ್ತಿಯಲ್ಲಿರುವ ಭದ್ರತಾ ನಿರ್ಬಂಧ/ಕರ್ಫ್ಯೂ ಮತ್ತು ಸಂಪರ್ಕ ತಡೆಯನ್ನು ಖಂಡಿಸುವಲ್ಲಿ ಒಐಸಿಯ ಸ್ವತಂತ್ರ ಖಾಯಂ ಮಾನವಹಕ್ಕುಗಳ ಆಯೋಗವು ಅಂತರ್‌ರಾಷ್ಟ್ರೀಯ ಸಮುದಾಯವನ್ನು ಸೇರಿಕೊಳ್ಳುತ್ತದೆ. ಈ ನಿರ್ಬಂಧಗಳು ಈದುಲ್ ಅಝ್‌ಹಾ ಸಂದರ್ಭದಲ್ಲೂ ಮುಂದುವರಿದಿತ್ತು’’ ಎಂದು ಹೇಳಿಕೆಯೊಂದರಲ್ಲಿ ಒಐಸಿ ಹೇಳಿದೆ.
‘‘ಜನರು ಸರಕಾರದ ವಿರುದ್ಧ ಪ್ರತಿಭಟನೆ ಮಾಡಬಹುದು ಎಂಬ ಹೆದರಿಕೆಯಿಂದ, ಶ್ರೀನಗರದ ಐತಿಹಾಸಿಕ ಜಾಮಾ ಮಸೀದಿ ಮತ್ತು ಇತರ ಮಸೀದಿಗಳಲ್ಲಿ ಈದ್ ಪ್ರಾರ್ಥನೆ ನಡೆಸಲು ಜನ ಸೇರುವುದನ್ನು ತಡೆಯಲಾಗಿತ್ತು ಎಂದು ಸ್ಥಳೀಯ ಮತ್ತು ಅಂತರ್‌ರಾಷ್ಟ್ರೀಯ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿವೆ’’ ಎಂದು ಅದು ತಿಳಿಸಿದೆ.
‘‘ಈ ಸ್ವೇಚ್ಛಾಚಾರದ ಹಾಗೂ ಅನ್ಯಾಯದ ಆಡಳಿತಾತ್ಮಕ ಕ್ರಮಗಳು ಕಾಶ್ಮೀರಿಗಳು ತಮ್ಮ ಧಾರ್ಮಿಕ ವಿಧಿಗಳನ್ನು ನೆರವೇರಿಸದಂತೆ ತಡೆದಿವೆ. ಇದು ಧಾರ್ಮಿಕ ಸ್ವಾತಂತ್ರ್ಯ ದ ಹಕ್ಕಿನ ಸಾರಾಸಗಟು ಉಲ್ಲಂಘನೆಯಾಗಿವೆ’’ ಎಂದು ಹೇಳಿಕೆ ತಿಳಿಸಿದೆ.







