ಹಿರಿಯರ ಬಲಿದಾನ ಮರೆಯದಿರಿ: ಪ್ರೊ.ಉಮಾಮಹೇಶ್ವರ್ ರಾವ್
ಎನ್‌ಐಟಿಕೆಯಲ್ಲಿ ಸ್ವಾತಂತ್ರೋತ್ಸವ

ಮಂಗಳೂರು, ಆ.16: ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಮಾಡಿದ ಬಲಿದಾನಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಅಂತಹ ಬಲಿದಾನವನ್ನು ನಾವು ಎಂದಿಗೂ ಮರೆಯಬಾರದು ಎಂದು ಎನ್‌ಐಟಿಕೆ ಸುರತ್ಕಲ್‌ನ ಆಡಳಿತ ಮಂಡಳಿ ನಿರ್ದೇಶಕ ಪ್ರೊ.ಉಮಾಮಹೇಶ್ವರ್ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಅಂಗವಾಗಿ ಎನ್‌ಐಟಿಕೆ ಸುರತ್ಕಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಭಾರತದಲ್ಲಿ ನಮ್ಮೆಲ್ಲರ ಹೆಗಲ ಮೇಲೆ ಜವಾಬ್ದಾರಿಗಳು ಹೆಚ್ಚುತ್ತಿವೆ. ಅದೇ ರೀತಿಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಯೂ ಅತ್ಯುತ್ತಮ ಯುವ ಸಮುದಾಯವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊರಬೇಕು. ಅದಕ್ಕಾಗಿ ವಿದ್ಯಾ ಸಂಸ್ಥೆಯ ಎಲ್ಲ ಸಿಬ್ಬಂದಿ ಶ್ರಮಪಡಬೇಕು ಎಂದು ಕರೆ ನೀಡಿದರು.
ಪರಿಸರ ಸಂರಕ್ಷಣೆಯ ಮೊದಲ ಹೆಜ್ಜೆಯಾಗಿ ಮತ್ತು ಎನ್‌ಐಟಿಕೆಯ ವಜ್ರಮಹೋತ್ಸವ ಆಚರಣೆಯ ಭಾಗವಾಗಿ ‘ಒಬ್ಬ ವಿದ್ಯಾರ್ಥಿ ಒಂದು ಗಿಡ’ ಎಂಬ ವಿನೂತನವಾದ ಗಿಡ ನೆಡುವ ಕಾರ್ಯಕ್ರಮಕ್ಕೆ ಸಂಸ್ಥೆಯ ಆವರಣದಲ್ಲಿರುವ ‘ಪಂಚವಟಿ’ಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕ ಪ್ರೊ.ಉಮಾಮಹೇಶ್ವರ್ ರಾವ್ ಹಾಗೂ ಕುಲಪತಿ ರವೀಂದ್ರನಾಥ ಕೆ. ಚಾಲನೆ ನೀಡಿದರು.







