ಈ ಅದ್ಭುತ ಆರೋಗ್ಯಲಾಭಗಳನ್ನು ನೀಡುತ್ತೆ ನವಿಲುಕೋಸು…
ಕ್ಯಾಬೇಜಿನ ವರ್ಗಕ್ಕೆ ಸೇರಿರುವ ನವಿಲುಕೋಸು ಎಲ್ಲ ಕಡೆಗೂ ದೊರೆಯುವ ಸಾಮಾನ್ಯ ತರಕಾರಿಯಾಗಿದೆ. ವಿಶಿಷ್ಟ ವಾಸನೆಯಿಂದಾಗಿ ಕೆಲವರು ಈ ತರಕಾರಿಯನ್ನು ಇಷ್ಟಪಡುವುದಿಲ್ಲವಾದರೂ ನಮ್ಮ ಶರೀರಕ್ಕೆ ಹಲವಾರು ಆರೋಗ್ಯಲಾಭಗಳನ್ನು ಅದು ನೀಡುತ್ತದೆ.
ನವಿಲುಕೋಸಿನಲ್ಲಿ ಕಾರ್ಬೊಹೈಡ್ರೇಟ್‌ಗಳು ಕಡಿಮೆ ಪ್ರಮಾಣದಲ್ಲಿವೆ. ಸಾಕಷ್ಟು ನಾರು,ಪ್ರೋಟಿನ್ ಜೊತೆಗೆ ಸಿ ವಿಟಾಮಿನ್‌ನ ಸಮೃದ್ಧ ಮೂಲವಾಗಿದೆ. ವಿಟಾಮಿನ್ ಬಿ6,ಪೊಟ್ಯಾಷಿಯಂ,ಮ್ಯಾಗ್ನೀಷಿಯಂ ಮತು ಮ್ಯಾಂಗನೀಸ್‌ಗಳನ್ನು ಹೊಂದಿರುವ ಅದರಲ್ಲಿ ರಕ್ತಕಣಗಳ ಬೆಳವಣಿಗೆಯಲ್ಲಿ ನೆರವಾಗುವ ಫಾಲೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿವೆ.
ರೋಗ ನಿರೋಧಕ ವ್ಯವಸ್ಥೆ ಮತ್ತು ರಕ್ತಕಣಗಳ ರಕ್ಷಣೆಯಿಂದ ಹಿಡಿದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವವರೆಗೆ ಹಲವಾರು ಆರೋಗ್ಯ ಲಾಭಗಳನ್ನು ನವಿಲುಕೋಸು ನೀಡುತ್ತದೆ. ಇಲ್ಲಿವೆ ಅಂತಹ ಕೆಲವು ಆರೋಗ್ಯಲಾಭಗಳ ಮಾಹಿತಿ....
► ಚಯಾಪಚಯವನ್ನು ಹೆಚ್ಚಿಸುತ್ತದೆ
ಬಿ ವಿಟಾಮಿನ್‌ನ ಸಮೃದ್ಧ ಮೂಲವಾಗಿರುವ ನವಿಲುಕೋಸು ಶರೀರದಲ್ಲಿಯ ಕಿಣ್ವಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಮೂಲಕ ಚಯಾಪಚಯವನ್ನು ಹೆಚ್ಚಿಸುತ್ತದೆ.
► ದೇಹತೂಕ ಇಳಿಸಲು ನೆರವಾಗುತ್ತದೆ
ಅಧಿಕ ನಾರು ಮತ್ತು ಕಡಿಮೆ ಕ್ಯಾಲರಿಗಳನ್ನೊಳಗೊಂಡಿರುವ ನವಿಲುಕೋಸು ದೀರ್ಘ ಸಮಯದವರೆಗೆ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ ಮತ್ತು ಚಯಾಪಚಯವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ. ಇವೆಲ್ಲ ಶರೀರದ ತೂಕ ಇಳಿಸಿಕೊಳ್ಳಲು ನೆರವಾಗುತ್ತವೆ.
► ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ನವಿಲುಕೋಸಿನಲ್ಲಿರುವ ಪೋಷಕಾಂಶಗಳು ಶರೀರದ ರೋಗ ನಿರೋಧಕ ವ್ಯವಸ್ಥೆಗೆ ಸಹಾಯಕಾರಿಯಾಗಿವೆ. ವಿಟಮಿನ್ ಬಿ ಮತ್ತು ಸಿ ಸಮೃದ್ಧವಾಗಿರುವ ನವಿಲುಕೋಸು ಕೆಂಪು ರಕ್ತಕಣಗಳನ್ನು ವೃದ್ಧಿಸುವಲ್ಲಿ,ಪ್ರೋಟಿನ್ ಚಯಾಪಚಯದಲ್ಲಿ ಮತ್ತು ನಿರೋಧಕ ಶಕ್ತಿಯ ಸೂಕ್ತ ಕಾರ್ಯನಿರ್ವಹಣೆಯಲ್ಲಿ ಪರಿಣಾಮಕಾರಿ ಪಾತ್ರವನ್ನು ಹೊಂದಿದೆ. ಅದರಲ್ಲಿರುವ ವಿಟಾಮಿನ್ ಬಿ6 ರೋಗಕಾರಕಗಳ ಆಕ್ರಮಣದ ವಿರುದ್ಧ ಹೋರಾಡುವ ಬಿಳಿಯ ರಕ್ತಕಣಗಳ ಸಂಖ್ಯೆ ಹೆಚ್ಚಿಸಲು ಅಗತ್ಯವಾದ ಮುಖ್ಯ ಪೋಷಕಾಂಶವಾಗಿದ್ದು,ತನ್ಮೂಲಕ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ.
► ಜೀರ್ಣಕ್ರಿಯೆಗೆ ನೆರವಾಗುತ್ತದೆ.
ನವಿಲುಕೋಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹೊಟ್ಟೆ ಸೆಳೆತಗಳನ್ನು ತಗ್ಗಿಸಲು,ಮಲಬದ್ಧತೆಯನ್ನು ನಿವಾರಿಸಲು,ಹೊಟ್ಟೆಯುಬ್ಬರ ಮತ್ತು ಅನಿಯಂತ್ರಿತ ಕರುಳು ಚಲನವಲನವನ್ನು ತಡೆಯಲೂ ನವಿಲುಕೋಸು ನೆರವಾಗುತ್ತದೆ. ಅದು ಪೋಷಕಾಂಶಗಳನ್ನು ಹೀರಿಕೊಳ್ಳುವ ಶರೀರದ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ಜಠರಗರುಳು ವ್ಯೂಹದ ಆರೋಗ್ಯವನ್ನು ಹೆಚ್ಚಿಸುತ್ತದೆ.
► ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
ನವಿಲುಕೋಸಿನಲ್ಲಿರುವ ಶಕ್ತಿಶಾಲಿ ಸಸ್ಯಜನಕ ಸಂಯುಕ್ತವು ಅದನ್ನು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುವ ಪರಿಪೂರ್ಣ ಆಹಾರವನ್ನಾಗಿಸಿದೆ. ಅದು ರಕ್ತನಾಳಗಳನ್ನು ಹಿಗ್ಗಿಸುವ ಮತ್ತು ಉರಿಯೂತವನ್ನು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅದರಲ್ಲಿರುವ ಆಂಥೊಸಿಯಾನಿನ್‌ಗಳು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತವೆ ಮತ್ತು ಹೃದಯಾಘಾತದ ಅಪಾಯವನ್ನು ತಗ್ಗಿಸುತ್ತವೆ.
► ರೋಗಗಳನ್ನು ಪ್ರತಿರೋಧಿಸುತ್ತದೆ
ನವಿಲುಕೋಸಿನಲ್ಲಿ ಹೇರಳವಾಗಿರುವ ಉತ್ಕರ್ಷಣ ನಿರೋಧಕಗಳು ವಿವಿಧ ರೋಗಗಳನ್ನು ದೂರವಿರಿಸುವಲ್ಲಿ ಪರಿಣಾಮಕಾರಿಯಾಗಿವೆ. ಅದು ಕ್ಯಾನ್ಸರ್ ವಿರೋಧಿ ಗುಣಗಳನ್ನೂ ಹೊಂದಿದೆ.
► ಕಣ್ಣುಗಳ ಆರೋಗ್ಯಕ್ಕೆ ನೆರವಾಗುತ್ತದೆ
ವಿಟಾಮಿನ್ ಎ ಅನ್ನು ಸಮೃದ್ಧವಾಗಿ ಹೊಂದಿರುವ ನವಿಲುಕೋಸು ಕಣ್ಣುಗಳನ್ನು ಆರೋಗ್ಯಯುತವಾಗಿರಿಸುತ್ತದೆ. ಅದು ಕಣ್ಣುಗಳ ಸ್ನಾಯುಕ್ಷೀಣತೆ ಮತ್ತು ಪೊರೆ ಉಂಟಾಗುವುದನ್ನು ತಡೆಯುತ್ತದೆ ಹಾಗೂ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.