ಕಾಬೂಲ್ ನಲ್ಲಿ ಆತ್ಮಾಹುತಿ ದಾಳಿ; 63 ಸಾವು
ಕಾಬೂಲ್ (ಅಫ್ಘಾನಿಸ್ತಾನ), ಆ. 18: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನಡೆದ ಸ್ಫೋಟವೊಂದರಲ್ಲಿ ಕನಿಷ್ಠ 63 ಮಂದಿ ಮೃತಪಟ್ಟಿದ್ದಾರೆ ಹಾಗೂ 182 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನಾ ಉಪಸ್ಥಿತಿಯನ್ನು ತಗ್ಗಿಸಲು ಅಮೆರಿಕ ಮತ್ತು ತಾಲಿಬಾನ್ ನಡುವೆ ನಡೆಯುತ್ತಿರುವ ಮಾತುಕತೆಗಳು ಅಂತಿಮ ಹಂತದಲ್ಲಿ ಇರುವಾಗ ಈ ಭೀಕರ ಸ್ಫೋಟ ನಡೆದಿದೆ. ಆದರೆ, ತನಗೂ ಈ ದಾಳಿಗೂ ಸಂಬಂಧವಿಲ್ಲ ಎಂದು ತಾಲಿಬಾನ್ ಹೇಳಿದೆ.
‘‘ಶನಿವಾರ ರಾತ್ರಿ ಪಶ್ಚಿಮ ಕಾಬೂಲ್ನ ಮದುವೆ ಸಮಾರಂಭವೊಂದರಲ್ಲಿ ನಡೆದ ಸ್ಫೋಟದಲ್ಲಿ ಸತ್ತವರು ಮತ್ತು ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ’’ ಎಂದು ಆಂತರಿಕ ಸಚಿವಾಲಯದ ವಕ್ತಾರ ನಸ್ರತ್ ರಹೀಮಿ ತಿಳಿಸಿದರು.
ಅಫ್ಘಾನಿಸ್ತಾನದಲ್ಲಿ ಮದುವೆಗಳು ಬಹಳ ವಿಜೃಂಭಣೆಯಿಂದ ನಡೆಯುತ್ತವೆ. ಬೃಹತ್ ಮದುವೆ ಮಂಟಪಗಳಲ್ಲಿ ನಡೆಯುವ ಮದುವೆಗಳಲ್ಲಿ ನೂರಾರು ಹಾಗೂ ಹಲವು ಸಂದರ್ಭಗಳಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಾರೆ.